ADVERTISEMENT

ವೃತ್ತಿಯಲ್ಲಿ ನಿಷ್ಠೆ, ದಕ್ಷತೆ ಅಳವಡಿಸಿಕೊಳ್ಳಿ

ನೋಟರಿಗಳ 11ನೇ ಸಮ್ಮೇಳನದಲ್ಲಿ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 9:51 IST
Last Updated 10 ಜುಲೈ 2017, 9:51 IST

ರಾಯಚೂರು: ‘ಸಮಾಜದಲ್ಲಿ ವಕೀಲರಿಗೆ ಹಾಗೂ ನೋಟರಿಗಳಿಗೆ ಮಹತ್ವದ ಸ್ಥಾನವಿದೆ. ನಿಷ್ಠೆ ಹಾಗೂ ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ವೃತ್ತಿಯ ಗೌರವ ಉಳಿಸಲು ಪ್ರಯತ್ನಿಸಬೇಕು’ ಎಂದು ಕರ್ನಾಟಕ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ರಾಜ್ಯ ನೋಟರಿಗಳ ಸಂಘದಿಂದ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ನೋಟರಿಗಳ 11ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ವಕೀಲರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೈಗೊಂಡಿರುವ ಹೋರಾಟ ಜನಮನದಲ್ಲಿ ಉಳಿದಿದೆ. ಆ ಗೌರವ ಉಳಿಸಿಕೊಂಡು ಮುಂದುವರೆಯುವ ಜವಾಬ್ದಾರಿ ವೃತ್ತಿ ನಿರತರು ಮಾಡಬೇಕು. ನ್ಯಾಯಾಲಯದಲ್ಲಿ ದುಡಿಯುವ ಸಿಬ್ಬಂದಿಗೆ ಸೌಲಭ್ಯಗಳು ಕಲ್ಪಿಸಲು ಸರ್ಕಾರ ಕಾಳಜಿ ವಹಿಸಬೇಕು’ ಎಂದರು.

ADVERTISEMENT

‘ನೋಟರಿಗಳ ಹುದ್ದೆ ಪ್ರಮುಖ ಹುದ್ದೆಯಾಗಿದೆ. ಹುದ್ದೆಯ ಘನತೆಗೆ ಧಕ್ಕೆಯಾಗದಂತೆ ಗುಣಗಳು ಅಳವಡಿಸಿಕೊಳ್ಳಬೇಕಾಗಿದೆ. ವಕೀಲರ ಕಲ್ಯಾಣಕ್ಕೆ ಬಾರ್‌ ಕೌನ್ಸಿಲ್‌ ನೆರವು ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಅದೇ ರೀತಿ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ನೋಟರಿಗಳ ಸಂಘದ ರಾಜ್ಯ ಘಟಕ ಆಧ್ಯಕ್ಷ ಎಸ್.ಸುರೇಶ್ ಬಾಬು ಪ್ರಾಸ್ತಾವಿಕ ಮಾತನಾಡಿ, ‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೋಟರಿಗಳ ಭವನ ನಿರ್ಮಾಣ ಮಾಡಲು ಸರ್ಕಾರ ಪೂರಕವಾದ ಕ್ರಮ ಜರುಗಿಸಬೇಕು. ಸಮಾಜದ ಓರೆ–ಕೋರೆ ತಿದ್ದುವ ಶಕ್ತಿ ವಕೀಲರಗಿದ್ದು, ಸಾಮರಸ್ಯದ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಬೇಕು. ವೃತ್ತಿಯ ಗೌರವ ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ’ ಎಂದು ತಿಳಿಸಿದರು.

ಸಂಸದರಾದ ಸಂಗಣ್ಣ ಕರಡಿ, ಬಿ.ವಿ.ನಾಯಕ, ಶಾಸಕರಾದ  ಎನ್.ಎಸ್.ಬೋಸರಾಜು, ಬಸವರಾಜ ಪಾಟೀಲ ಇಟಗಿ, ಡಾ.ಶಿವರಾಜ ಪಾಟೀಲ, ಮಾನಪ್ಪ ವಜ್ಜಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ನೋಟರಿ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಕೆ.ವಿ.ರೆಡ್ಡಿ, ಕೋಟೇಶ್ವರರಾವ್, ನೀಲಕಂಠರಾವ್, ಅಯ್ಯಪ್ಪ ನಾಯಕ, ರುದ್ರಪ್ಪ ಯಲೆಗಾರ್, ಜೆ.ರಾಯಪ್ಪ, ಅಮರೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.