ADVERTISEMENT

ವೈಟಿಪಿಎಸ್‌: ಆರು ತಿಂಗಳಲ್ಲಿ 2ನೇ ಘಟಕ ಕಾರ್ಯಾರಂಭ

ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 6:25 IST
Last Updated 9 ಮಾರ್ಚ್ 2017, 6:25 IST
ರಾಯಚೂರು: ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ವೈಟಿಪಿಎಸ್‌)ದ ಎರಡನೇ ಘಟಕದ ಕಾಮಗಾರಿ ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಯೋಜಿಸಲಾಗಿದೆ ಎಂದು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ ತಿಳಿಸಿದರು.
 
ವೈಟಿಪಿಎಸ್‌ ತಾಂತ್ರಿಕ ಅಧಿಕಾರಿಗ ಳೊಂದಿಗೆ ಒಂದನೇ ಘಟಕವನ್ನು ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದರು.
 
ಒಂದನೇ ಘಟಕದಲ್ಲಿ 800 ಮೆಗಾವಾಟ್‌ ವಿದ್ಯುತ್‌ 72 ಗಂಟೆ ನಿರಂತರ ಉತ್ಪಾದಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಮೂರು ದಿನಗಳ ಹಿಂದೆ ಆರಂಭಿಸಿದ್ದ ಪ್ರಾಯೋಗಿಕ ಪರೀಕ್ಷೆ ವೀಕ್ಷಿಸಲು ಬಿಎಚ್‌ಇಎಲ್‌, ಕೆಪಿಟಿಸಿಎಲ್‌ ಹಾಗೂ ಆರ್‌ಪಿಸಿಎಲ್‌ ಅಧಿಕಾರಿಗಳು ಕೇಂದ್ರದಲ್ಲಿ ಉಳಿದು ಕೊಂಡಿದ್ದರು. ಕನಿಷ್ಠ 800 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ನಿರಂತರವಾಗಿ ನಡೆಯಬೇಕಾಗಿತ್ತು. ಗರಿಷ್ಠ 840 ಮೆಗಾವಾಟ್‌ವರೆಗೂ ವಿದ್ಯುತ್‌ ಅನ್ನು ಒಂದನೇ ಘಟಕದಿಂದ ಪಡೆಯುವುದಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದರು. 
 
ದೇಶದಲ್ಲಿ 800 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಮೂರನೇ ಕೇಂದ್ರ ವೈಟಿಪಿಎಸ್‌ ಆಗಿದೆ. ಗುಜರಾತ್‌ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಇಂತಹ ಘಟಕಗಳಿವೆ. ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆಗೆ ವೈಟಿಪಿಎಸ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗಿದೆ. ಇದರಿಂದ ಶೇ10ರಷ್ಟು ಶಾಖೋತ್ಪನ್ನ ಹೆಚ್ಚಾಗಿ, ಕಲ್ಲಿದ್ದಲು ಬಳಕೆ ಕಡಿಮೆಯಾಗಿದೆ. ಪ್ರತಿದಿನ 11 ಸಾವಿರ ಟನ್‌ ಕಲ್ಲಿದ್ದಲು ಒಂದನೇ ಘಟಕಕ್ಕೆ ಬಳಕೆಯಾಗುತ್ತಿದೆ ಎಂದು ಹೇಳಿದರು.
 
ಈ ಮೊದಲಿನ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಕೇಂದ್ರಗಳಿಗೆ ಹೋಲಿಸಿದರೆ ವೈಟಿಪಿಎಸ್‌ನಲ್ಲಿ ಶೇ 5ರಷ್ಟು ಪರಿಸರ ಮಾಲಿನ್ಯ ಕಡಿಮೆ ಇದೆ. ಸಲ್ಫರ್‌ ಆಕ್ಸೈಡ್‌, ನೈಟ್ರೆಟ್‌ ಆಕ್ಸೈಡ್‌ ಹಾಗೂ ಇತರೆ ಮಾಲಿನ್ಯ ರಾಸಾಯನಿಕ ಗಳು ಕಡಿಮೆ ಪ್ರಮಾಣದಲ್ಲಿ ಹೊರ ಸೂಸುತ್ತಿವೆ. ವೈಟಿಪಿಎಸ್‌ ವ್ಯಾಪ್ತಿಯಲ್ಲಿ ಸಸಿ ನೆಡುವುದಕ್ಕೆ ಅರಣ್ಯ ಇಲಾಖೆಗೆ ಈಗಾಗಲೇ ಹಣ ಸಂದಾಯ ಮಾಡಲಾ ಗಿದೆ. 85 ಸಾವಿರ ಸಸಿಗಳನ್ನು ಅರಣ್ಯ ಇಲಾಖೆ  ಸಿದ್ಧವಾಗಿ ಇಟ್ಟುಕೊಂಡಿದೆ. ಮಳೆಗಾಲ ಆರಂಭವಾದ ಕೂಡಲೇ ಸಸಿಗಳನ್ನು ನೆಡಲಾಗುತ್ತದೆ ಎಂದರು.
 
ರಾಜ್ಯದಲ್ಲಿ ಸುಮಾರು 10 ಸಾವಿರ ಮೆಗಾವಾಟ್‌ ವಿದ್ಯುತ್‌ ಬೇಡಿಕೆ ಇದೆ. ಕಳೆದ ವಾರ ಅತ್ಯಂತ ಗರಿಷ್ಠ 10,240 ವಿದ್ಯುತ್‌ ಮೆಗಾವಾಟ್‌ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಕಲ್ಲಿದ್ದಲು ಗಣಿ ಲಭ್ಯತೆ ಆಧರಿಸಿ ರಾಜ್ಯದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸುವುದಕ್ಕೆ ಯೋಜನೆ ಮಾಡಲಾಗಿದೆ ಎಂದು ಹೇಳಿದರು.

* ರಾಜ್ಯದ ವಿದ್ಯುತ್‌ ಬೇಡಿಕೆ ಪೂರೈಕೆಯಲ್ಲಿ ಜಲವಿದ್ಯುತ್‌ ಪ್ರಮಾಣವು ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿತ್ತು. ಈಗ ಶಾಖೋತ್ಪನ್ನ ವಿದ್ಯುತ್‌ ಪಾಲು ಏರಿಕೆಯಾಗಿದೆ.
ಜಿ.ಕುಮಾರನಾಯಕ, ಕೆಪಿಸಿಎಲ್‌, ವ್ಯವಸ್ಥಾಪಕ ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.