ADVERTISEMENT

ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರೆ ಆಸರೆ

ಪಿ.ಕೃಷ್ಣ
Published 29 ನವೆಂಬರ್ 2017, 10:10 IST
Last Updated 29 ನವೆಂಬರ್ 2017, 10:10 IST
ಸಿರವಾರ ಸಮೀಪದ ನುಗಡೋಣಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆ ಬರಹಗಳಿಂದ ಸಿಂಗಾರಗೊಂಡಿರುವ ಕೊಠಡಿ
ಸಿರವಾರ ಸಮೀಪದ ನುಗಡೋಣಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆ ಬರಹಗಳಿಂದ ಸಿಂಗಾರಗೊಂಡಿರುವ ಕೊಠಡಿ   

ಸಿರವಾರ: ಸಮೀಪದ ನುಗಡೋಣಿ ಗ್ರಾಮದ ಸರ್ಕಾರ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯು ಶಿಕ್ಷಕರು ಮತ್ತು ಗ್ರಾಮಸ್ಥರ ಶ್ರಮದಿಂದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.

ಶಾಲೆಯ ಪ್ರತಿಯೊಂದು ಕೊಠಡಿಗಳು ಗೋಡೆ ಬರಹಗಳಿಂದ ಸಿಂಗಾರಗೊಂಡು, ಪ್ರತಿಯೊಂದು ಶಬ್ಧಗಳು ಕಲಿಯುವ ತರಗತಿ ಮಕ್ಕಳಿಗೆ ಪಠ್ಯೇತರ ಅನೇಕ ಸಾಮಾನ್ಯ ಜ್ಞಾನವೂ ಕಲಿಯಲು ಸಹಕಾರಿಯಾಗಿದೆ.

ಗ್ರಾಮದ ಹೂಗಾರ ಕುಟುಂಬದವರು ನೀಡಿದ ಸ್ಥಳದಲ್ಲಿ 1962 ರಲ್ಲಿ ಒಂದು ಕೊಠಡಿಯಲ್ಲಿ ಪ್ರಾರಂಭವಾದ ಶಾಲೆ ನಂತರದ ದಿನಗಳಲ್ಲಿ ಮಕ್ಕಳು ಸಂಖ್ಯೆ ಹೆಚ್ಚಾದಂತೆ ಸ್ಥಳದ ಕೊರತೆಯಿಂದ ತೊಂದರೆಯಾದಾಗ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಶಾಲೆಯ ಸುತ್ತಲಿನ ಬಯಲು ಸ್ಥಳವನ್ನು ಖರೀದಿಸಿ ಹೆಚ್ಚಿನ ಕೊಠಡಿಗಳ ನಿರ್ಮಾಣಕ್ಕೆ ಕೈ ಜೋಡಿಸಿದರು. ಪ್ರತಿಯೊಂದು ಕೊಠಡಿಯಲ್ಲಿ ವೈಟ್ ಬೋರ್ಡ್‌ಗಳನ್ನು ಅಳವಡಿಸಿ ವಿದ್ಯಾಭ್ಯಾಸಕ್ಕೆ ಗ್ರಾಮಸ್ಥರೇ ಅನುಕೂಲ ಮಾಡಿಕೊಟ್ಟಿದ್ದಾರೆ.

ADVERTISEMENT

1ರಿಂದ 8ನೇ ತರಗತಿಗಳಲ್ಲಿ 196 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 6 ಶಿಕ್ಷಕರು ಮತ್ತು ಒಬ್ಬ ಅತಿಥಿ ಶಿಕ್ಷಕರಿದ್ದಾರೆ. ಇಂಗ್ಲೀಷ್ ವಿಷಯದ ಶಿಕ್ಷಕರ ಕೊರತೆ ಇದ್ದರೂ ಉಳಿದ ಶಿಕ್ಷಕರು ಈ ಕೊರತೆ ನೀಗಿಸಿದ್ದಾರೆ. ಕುಡಿಯುವ ನೀರಿನ ಸಂಗ್ರಹದ ತೊಟ್ಟಿ ಮತ್ತು ನಲ್ಲಿಗಳ ಅಳವಡಿಕೆ, ಉಪಯೋಗ ಮತ್ತು ಹಾಳಾಗದಂತೆ ಮಾಡಿದ ಸಂರಕ್ಷಣೆ ಎಲ್ಲರಿಗೂ ಮಾದರಿಯಾಗಿದೆ.

ಪ್ರತಿವರ್ಷ ಶೈಕ್ಷಣಿಕ ಪ್ರವಾಸ, ವಿವಿಧ ಕ್ರೀಡಾಕೂಟ, ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ, ಪ್ರತಿವರ್ಷ ನಡೆಯುವ ರಾಷ್ಟ್ರೀಯ ವಿದ್ಯಾರ್ಥಿ ವೇತನಾ ಅರ್ಹತಾ ಪರೀಕ್ಷೆಯಲ್ಲಿ ಇಬ್ಬರಾದರೂ ವಿದ್ಯಾರ್ಥಿಗಳು ತೇರ್ಗಡೆಯಾಗುವುದು ಶಾಲೆಯ ಹೆಗ್ಗಳಿಕೆ.

ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಅಳವಡಿಕೆ ಉದ್ದೇಶದಿಂದ ಶಾಲಾ ಮಂತ್ರಿ ಮಂಡಲ, ಕನ್ನಡ ಸಂಘ, ಹಿಂದಿ, ಇಂಗ್ಲೀಷ್, ಸಮಾಜ ವಿಜ್ಞಾನ, ವಿಜ್ಞಾನ, ಗಣಿತ, ಕಲಾ, ಆರೋಗ್ಯ ಸಂಘಗಳನ್ನು ರಚಿಸಲಾಗಿದೆ. ಸರ್ಕಾರಿ ಶಾಲೆಗಳೆಂದರೆ ಕೀಳು ಮಟ್ಟದಲ್ಲಿ ನೋಡುವ ಇಂದಿನ ದಿನಗಳಲ್ಲಿ ಈ ಶಾಲೆ ಮಾದರಿಯಾಗಿದೆ.

* * 

ಶಾಲೆಗೆ ಕಾಪೌಂಡ್ ಮತ್ತು ಶೌಚಾಲಯಗಳು ಇಲ್ಲದಿರುವುದರಿಂದ ಮಕ್ಕಳಿಗೆ ತೊಂದರೆಯಾಗಿದ್ದು, ಸರ್ಕಾರ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ
ಅಮರೇಶ ಪೊಲೀಸಪಾಟೀಲ್
ನುಗುಡೋಣಿ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.