ADVERTISEMENT

ಶೋಷಿತರ ಪರ ಜಂಬಣ್ಣ ಹೋರಾಟ

ಅಮರಚಿಂತ ನುಡಿನಮನ ಕಾರ್ಯಕ್ರಮದಲ್ಲಿ ಡಾ.ದಸ್ತಗಿರಿಸಾಬ ದಿನ್ನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 7:13 IST
Last Updated 23 ಮಾರ್ಚ್ 2017, 7:13 IST

ಸಿಂಧನೂರು: ಸಮಾಜದ ಅಸಮಾನತೆ ಬೇರುಗಳನ್ನು ಶೋಧಿಸುವ, ಅಭಿವ್ಯಕ್ತಿಸುವ ತುಡಿತದಿಂದ ಜಡ್ಡುಗಟ್ಟಿದ ವ್ಯವಸ್ಥೆ ವಿರುದ್ಧ ಅಕ್ಷರದ ಹೋರಾಟ ನಡೆಸಿದ ಸಾಹಿತಿ ಜಂಬಣ್ಣ ಅಮರಚಿಂತ ಜನಮಾನಸದಲ್ಲಿ ಜೀವಂತವಾಗಿದ್ದಾರೆ ಎಂದು  ಪ್ರಾಧ್ಯಾಪಕ ಡಾ.ದಸ್ತಗಿರಿಸಾಬ ದಿನ್ನಿ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗದ ಆಶ್ರಯದಲ್ಲಿ ಬುಧವಾರ ನಡೆದ ‘ಜಂಬಣ್ಣ ಅಮರಚಿಂತರಿಗೆ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಲ್ಕು ದಶಕ ಕಾಲ ಅಮರಚಿಂತರು ಶೋಷಿತರು, ದಲಿತರಲ್ಲಿ ಜಾಗೃತಿ ಮೂಡಿಸಿದರು. ಬಂಡಾಯ ಸಾಹಿತ್ಯ ರಚನೆಯಲ್ಲಿ ಮಂಚೂಣಿ ಸಾಲಿನಲ್ಲಿದ್ದ ಅವರು  ಅನ್ಯಾಯ, ದೌರ್ಜನ್ಯ, ಶೋಷಣೆ, ಅಸ್ಪೃಶ್ಯತೆ ವಿರುದ್ಧ ಸೆಟೆದು ನಿಂತರು. ಆಕ್ರೋಶದ ಧ್ವನಿ ಎತ್ತಿದವರು. ದಲಿತ, ಶೋಷಿತರ ವಾಸ್ತವ ಬದುಕಿನ ಚಿತ್ರಣಗಳನ್ನು ತಮ್ಮ ಕಾವ್ಯದಲ್ಲಿ ಚಿತ್ರಿಸಿದರು. ಜೊತೆಗೆ ಹೋರಾಟ ರೂಪಿಸಿದವರು ಎಂದು ವಿವರಿಸಿದರು.

ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ ಮಾತನಾಡಿ, ಕಾವ್ಯ ಹಿಡಿಯಲಾರದ ಬದುಕನ್ನು ಚಿತ್ರಿಸಲು ಕಾದಂಬರಿ ಪ್ರಕಾರಕ್ಕೆ ಕೈಹಾಕಿದ ಅವರು, ‘ಕುರುಮಯ್ಯ ಮತ್ತು ಅಂಕುಶದೊಡ್ಡಿ’ ಹಾಗೂ ‘ಬೂಟುಗಾಲಿನ ಸದ್ದು’ ಎಂಬ ಎರಡು ಕಾದಂಬರಿ ಬರೆದು ದುಡಿಯುವ ಜನ ಸಮುದಾಯಗಳ ಬಗ್ಗೆ ಕಳಕಳಿ ಮೆರೆದಿದ್ದಾರೆ.  ಶ್ರೀಮಂತರು ಮತ್ತು ಪುರೋಹಿತಶಾಹಿ ವ್ಯವಸ್ಥೆ ಕ್ರೌರ್ಯವನ್ನು ತಮ್ಮ ಕಾದಂಬರಿ ಮೂಲಕ ಅನಾವರಣಗೊಳಿಸಿದ್ದಾರೆ ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್.ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿದರು.  ಕನ್ನಡ ವಿಭಾಗದ ಮುಖ್ಯಸ್ಥ ಕೆ.ಖಾದರಬಾಷಾ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಪ್ರಹ್ಲಾದರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಸಿಬ್ಬಂದಿ ಕಾರ್ಯದರ್ಶಿ ಎಂ.ಶಿವಯ್ಯ, ಪ್ರಾಧ್ಯಾಪಕಿ ಸುನೀತಾದೇವಿ, ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗದ ಅಧ್ಯಕ್ಷ ರುದ್ರೇಶ, ಪತ್ರಕರ್ತ ಅಮರೇಶ ಅಲಬನೂರು ಇದ್ದರು. ರಾಮಣ್ಣ ಬೇರಿಗಿ ನಿರೂಪಿಸಿದರು. ಹುಸೇನಪ್ಪ ಅಮರಾಪುರ ಕ್ರಾಂತಿಗೀತೆ ಹಾಡಿದರು.

*
ಸಾಹಿತ್ಯ, ಕಲೆ, ನಾಟಕ ಮತ್ತಿತರ ಸೃಜನಶೀಲ ಮಾಧ್ಯಮದ ಮೂಲಕ ಭಾವನೆ ಅಭಿವ್ಯಕ್ತಿಸುವ ಧ್ವನಿಗಳನ್ನು ಇಲ್ಲವಾಗಿಸುವ ಯತ್ನ ಈಚೆಗೆ ನಡೆಯುತ್ತಿರುವುದು ದುರಂತ.
-ಡಾ.ದಸ್ತಗಿರಿಸಾಬ ದಿನ್ನಿ,
ಪ್ರಾಧ್ಯಾಪಕ, ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.