ADVERTISEMENT

ಸಮಾಜದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಿ: ಸೇಠ್‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:25 IST
Last Updated 15 ಏಪ್ರಿಲ್ 2017, 9:25 IST

ರಾಯಚೂರು:  ಸ್ವಾರ್ಥಕ್ಕಾಗಿ ಸಂಘಟನೆ, ಅಧಿಕಾರಕ್ಕಾಗಿ ಹೋರಾಟ ಮಾಡುವುದು ಬದಲಾಗಬೇಕು. ಅಂಬೇಡ್ಕರ್‌ಅವರ ಜೀವನವನ್ನು ಮಾದರಿಯನ್ನಾಗಿಸಿಕೊಂಡು ಮೀಸಲಾತಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ 126ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ₹27 ಸಾವಿರ ಕೋಟಿ ಖರ್ಚು ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಇಲಾಖೆಗಳ ವ್ಯಾಪ್ತಿಯಲ್ಲಿ ವಿಳಂಬ ಆಗದೆ ಸಕಾಲಕ್ಕೆ ಕಾರ್ಯಚಟುವಟಿಕೆಗಳು ನಡೆಸಲು ಕ್ರಮ ಜರುಗಿಸಲಾಗಿದೆ. ಪರಿಶಿಷ್ಟರ ಹಣವನ್ನು ಇತರೆ ಉದ್ದೇಶಗಳಿಗೆ ಬಳಕೆ ಆಗದಂತೆ ಸರ್ಕಾರ ಕಾನೂನು ಜಾರಿಗೊಳಿಸಿದೆ ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪ್ಪುಗೆರೆ ಸೋಮಶೇಖರ ಉಪನ್ಯಾಸ ನೀಡಿ, ಅಂಬೇಡ್ಕರ್‌ ಅವರ ಜಯಂತಿ ಆಚರಣೆಗೆ ಸೀಮಿತವಾಗದೆ ಅವರನ್ನು ಅನುಸರಿಸಬೇಕು. ಅಂಬೇಡ್ಕರ್‌ ಅವರನ್ನು ದಲಿತರಿಗೆ ಸೀಮಿತಗೊಳಿಸದೆ ಜಾತ್ಯತೀತವಾಗಿ ಕಾಣುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ADVERTISEMENT

ದಲಿತರನ್ನು ಅಪರಾಧಿ ಸ್ಥಾನದಲ್ಲಿಟ್ಟು ಅಪಮಾನ ದೃಷ್ಟಿಯಿಂದ ನೋಡಲಾಗುತ್ತಿದ್ದು, ಸಂವಿಧಾನ ಗಂಡಾಂತರದಲ್ಲಿದೆ. ಇದರಿಂದ ಪ್ರಜಾಪ್ರಭುತ್ವ ಕೂಡ ಗಂಡಾಂತರದಲ್ಲಿದೆ. ಈ ಬಗ್ಗೆ ಚಿಂತನೆ ನಡೆಸಬೇಕು ಎಂದರು.

ಅಂಬೇಡ್ಕರ್‌ ಗಾಂಧೀಜಿಗಿಂತ ದೇಶದ ಬಹುದೊಡ್ಡ ಅಹಿಂಸಾವಾದಿ. ಅವರು ಹುಟ್ಟಿನಿಂದ ಸಾಯುವವರೆಗೆ ಎಲ್ಲಾ ನೋವುಗಳು ಅನುಭವಿಸಿದರೂ ಸಂವಿಧಾನ ರಚನೆ ಸಮಯದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ದಲಿತರಿಗೆ ಮಾತ್ರವಲ್ಲದೆ ಎಲ್ಲ ಜಾತಿಗಳಿಗೂ ಸಂವಿಧಾನ ಬದ್ಧವಾದ ಹಕ್ಕುಗಳು ಒದಗಿಸಿದ್ದಾರೆ. ಯಾವುದೇ ಜಾತಿಗೆ ಅನ್ಯಾಯ ಮಾಡಿದ್ದು ದಾಖಲೆ ಸಮೇತವಾಗಿ ತೋರಿಸಿದರೆ ಇಡೀ ಸಮುದಾಯ ಕ್ಷಮೆ ಕೋರುತ್ತದೆ ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸರೋಜ ಸ್ವಾಗತಿಸಿದರು. ವಿಧಾನ ಪರಿಷತ್‌ ಸದಸ್ಯರಾದ ಎನ್.ಎಸ್‌.ಬೋಸರಾಜು, ಶರಣಪ್ಪ ಮಟ್ಟೂರು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಪಾಟೀಲ, ನಗರಸಭೆ ಅಧ್ಯಕ್ಷೆ ಹೇಮಲತಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣ ಇರಬಗೇರಾ, ಸೈಯದ್‌ ಸೊಹೆಲ್‌ ಇದ್ದರು.

ಮೆರವಣಿಗೆ:  ನಗರದ ಅಂಬೇಡ್ಕರ್‌ವೃತ್ತದಲ್ಲಿರುವ ಅಂಬೇಡ್ಕರ್‌ ಪುತ್ಥಳಿಗೆ ಪೂಜೆ ಸಲ್ಲಿಸಿ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಅಂಬೇಡ್ಕರ್‌ ಅವರ ಭಾವಚಿತ್ರದ ಮೆರಣಿಗೆ ಅದ್ಧೂರಿಯಾಗಿ ನಡೆಯಿತು. ರಂಗಮಂದಿರದವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.