ADVERTISEMENT

ಸಿಂಧನೂರು: ಕೆರೆಗಳ ಭರ್ತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 7:09 IST
Last Updated 20 ಜುಲೈ 2017, 7:09 IST

ಸಿಂಧನೂರು:  ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಕುಡಿಯುವ ಉದ್ದೇಶಕ್ಕಾಗಿ ಹರಿಸಿರುವ ನೀರನ್ನು ಅನ್ಯಕಾರಣಕ್ಕೆ ಬಳಕೆಯಾಗದಂತೆ ಸರ್ಕಾರಿ ಕೆರೆಗಳನ್ನು ತುಂಬಿಸಿಕೊಳ್ಳಲು ಅಧಿಕಾರಿಗಳು ಹೆಚ್ಚಿನ ಜಾಗ್ರತೆವಹಿಸಬೇಕು. ನಿರ್ಲಕ್ಷ್ಯವಹಿಸಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ.ಬಸಣ್ಣ ಸೂಚಿಸಿದರು.

ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜುಲೈ 17ರ ಸಂಜೆಯಿಂದ ಕಾಲುವೆಗೆ ನೀರು ಬಿಡಲಾಗಿದ್ದು, ಜುಲೈ 27ರ ವರೆಗೆ ಹರಿಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಾರಣಕ್ಕೆ ನೀರು ಬಿಡಲಾಗಿದ್ದು ಇದರ ಸದ್ಬಳಕೆಯಾಗಬೇಕು. ಈ ಹಿಂದೆಯೂ ನೀರು ಬಿಟ್ಟ ಸಮಯದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಕೆರೆ ತುಂಬಿಸಲು ಅಗತ್ಯ ಕೆಲಸ ಮಾಡಿದ್ದರು. ಈ ಬಾರಿಯೂ ಸಹ ಕ್ರಮಕೈಗೊಳ್ಳುವಂತೆ ತಿಳಿಸಿದರು.

‘ಖಾಸಗಿ ಪಿಒಗಳನ್ನು ಬಂದ್ ಮಾಡಿ ಕೆಳಭಾಗಕ್ಕೆ ನೀರು ತಲುಪುವಂತೆ ನೋಡಿಕೊಳ್ಳಬೇಕು. ಯಾರು ಕಾಲುವೆಗೆ ಅಡ್ಡಲಾಗಿ ಬಂಡ್ ಹಾಕಬಾರದು. ನೀರು ತುಂಬಿಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಖರ್ಚು ವೆಚ್ಚವನ್ನು 14ನೇ ಹಣಕಾಸು ಯೋಜನೆಯಲ್ಲಿ ಇಟ್ಟುಕೊಳ್ಳಬೇಕು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯದರ್ಶಿ ಅವರಿಗೆ ವಿಷಯ ತಿಳಿಸಿ ಅನುದಾನ ಪಡೆಯಬೇಕು. ನೀರು ತುಂಬಿಸಿಕೊಳ್ಳಲು ರೈತರು ಅಡ್ಡಿಪಡಿಸಿ ಕೆರೆ ತುಂಬಿಸಿಕೊಳ್ಳಲು ಮುಂದಾದರೆ ಅಂತಹವರ ವಿರುದ್ಧ ಪೊಲೀಸರಿಗೆ ದೂರು ನೀಡಬೇಕು’ ಎಂದು ಬಸಣ್ಣ ಹೇಳಿದರು.

ADVERTISEMENT

ಪ್ರಭಾರಿ ತಹಶೀಲ್ದಾರ್ ಶಂಶಾಲಂ ಮಾತನಾಡಿ, ಖಾಸಗಿ ಕೆರೆ ತುಂಬಿಸಿಕೊಳ್ಳಲು ಅವಕಾಶ ನೀಡಬೇಡಿ. ಕಂದಾಯ ಇಲಾಖೆ ಸಿಬ್ಬಂದಿ ಕಡ್ಡಾಯವಾಗಿ ಕಾಲುವೆ ಮೇಲೆ ಗಸ್ತು ತಿರುಗಬೇಕು ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್‌ ನಾಗರಾಜ್ ಕಮ್ಮಾರ್ ಮಾತನಾಡಿ, ಕಾಲುವೆ ನೀರು ಕಳ್ಳತನ ಮಾಡುವ ಮತ್ತು ಸಹಕರಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ನಗರಸಭೆ ಪೌರಾಯುಕ್ತ ರಮೇಶ ವಟಗಲ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪವನಕುಮಾರ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಬಸವರಾಜ ಪಲ್ಲೇದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.