ADVERTISEMENT

‘ಸಿಬ್ಬಂದಿ ಹೊರಗುತ್ತಿಗೆ ರದ್ದುಪಡಿಸಿ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 8:51 IST
Last Updated 11 ನವೆಂಬರ್ 2017, 8:51 IST

ರಾಯಚೂರು: ಜಿಲ್ಲೆಯಾದ್ಯಂತ ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಯ ಸೇವೆಯನ್ನು ಕಾಯಂ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘವು ಟಿಯುಸಿಐ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

‘10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಅನುಭವದ ಆಧಾರದಲ್ಲಿ ಕಾಯಂ ಮಾಡಿಕೊಳ್ಳಬೇಕು. ಕಾರ್ಮಿಕರ ಹಿಂಬಾಕಿ ವೇತನವನ್ನು ಪಾವತಿಸಬೇಕು. ಕಾರ್ಮಿಕರ ಹಿಂಬಾಕಿ ವೇತನ ಕೊಡಬೇಕು. ಕಾರ್ಮಿಕರಿಗೆ ಸಮಾನ ದುಡಿಮೆಗೆ ಸಮಾನ ವೇತನ ನೀಡಬೇಕು. ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ವಾರ್ಡ್‌ಗಳನ್ನು ಅಮಾನತು ಮಾಡಬೇಕು’ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಮಸ್ಯೆಗಳಿಗೆ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾ ಮತ್ತು ತಾಲ್ಲೂಕುಗಳು ಅಧಿಕಾರಿಗಳು ಸಂಬಂಧಪಟ್ಟ ಪ್ರಾಚಾರ್ಯರು ಸ್ಪಂದಿಸುತ್ತಿಲ್ಲ’ ಎಂದರು.

ADVERTISEMENT

ಟಿಯುಸಿಐ ಜಿಲ್ಲಾ ಅಧ್ಯಕ್ಷ ಜಿ.ಅಮರೇಶ ಹಾಗೂ ಕರ್ನಾಟಕ ವಸತಿ ನಿಲಯ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೈಸಾರ್ ಅಹ್ಮದ್ ಮತ್ತು ಲಿಂಗಸುಗೂರು ತಾಲ್ಲೂಕಿನ ಸಿಪಿಐಎಂಎಲ್‌ ತಾಲ್ಲೂಕು ಕಾರ್ಯದರ್ಶಿ ತಿಪ್ಪರಾಜ ಗೆಜ್ಜಲಗಟ್ಟಾ ಹಾಗೂ ವಿವಿಧ ವಸತಿ ನಿಲಯಗಳ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.