ADVERTISEMENT

ಸೆ. 2ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 12:52 IST
Last Updated 29 ಆಗಸ್ಟ್ 2016, 12:52 IST
ಸೆ. 2ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ
ಸೆ. 2ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ   

ರಾಯಚೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ವಿದೇಶಿ ಬಂಡಾವಳ ಆಕರ್ಷಣೆಗಾಗಿ ಕಾರ್ಮಿಕರ ಹಿತವನ್ನು ಬಲಿಕೊಟ್ಟಿರುವುದನ್ನು ವಿರೋಧಿಸಿ ಸೆ. 2ರಂದು ಕಾರ್ಮಿಕ ಸಂಘಟನೆಗಳು ನಡೆಸಲಿರುವ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ (ಟಿಯುಸಿಐ) ಜಿಲ್ಲಾ ಘಟಕದ ಅಧ್ಯಕ್ಷ ಜಿ.ಅಮರೇಶ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರದ ಭಾಗವಾಗಿ ಸೆ. 1ರಂದು ಸಂಜೆ ಬೈಕ್ ರ್‍ಯಾಲಿ ಆಯೋಜಿಸಲಾಗಿದೆ. ಮರುದಿವಸ ನಗರದ ರೈಲು ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿ ಅವರೆಗೆ ಬೃಹತ್‌ ಮೆರವಣಿಗೆ ನಡೆಸಲಾಗುವುದು. ಸುಮಾರು 10 ಸಾವಿರ ಕಾರ್ಮಿಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಕಾರ್ಮಿಕ ವಿರೋಧಿ ಕಾನೂನುಗಳ ಜಾರಿ ನಿಲ್ಲಿಸಿ, ಕಾರ್ಮಿಕರಿಗೆ ಕನಿಷ್ಠ ₹ 22 ಸಾವಿರ ವೇತನ ನಿಗದಿಗೊಳಿಸಿ, ಕಾಯಂ ಕೆಲಸವಿದ್ದಕಡೆಗಳಲ್ಲಿ ಗುತ್ತಿಗೆ ಕಾರ್ಮಿಕರ ನೇಮಕ ಬೇಡ, ಸಂಘ ರಚಿಸುವ ಅಧಿಕಾರ ಮೊಟಕು ಮಾಡಬಾರದು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಶೇ 80ರಷ್ಟು ಕಾರ್ಮಿಕರು ಕಾರ್ಪೊರೇಟ್‌ ಕಂಪೆನಿಗಳ ಕಪಿಮುಷ್ಟಿಗೆ ಸುಲುಕಿ ಅಧೋಗತಿ ತಲುಪಿದ್ದಾರೆ. ಕಾರ್ಪೊರೇಟ್‌ ಕಂಪೆನಿಗಳ ತಾಳಕ್ಕೆ ಕುಣಿಯುತ್ತಿರುವ ಸರ್ಕಾರಗಳು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಪಾದಿಸಿದರು.

ಗೋಷ್ಠಿಯಲ್ಲಿ ಆರ್‌.ಹುಚ್ಚಾರೆಡ್ಡಿ, ಜಿ.ಅಡವಿರಾವ್‌, ಹನುಮಂತು, ಸತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.