ADVERTISEMENT

ಹಂದಿಗಳ ದಾಳಿ: ಬಾಲಕ ಗಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 4:49 IST
Last Updated 18 ಏಪ್ರಿಲ್ 2017, 4:49 IST
ಲಿಂಗಸುಗೂರು: ಸ್ಥಳೀಯ 18ನೇ ವಾರ್ಡ್‌ನ ಸಂಗಮೇಶ್ವರ ಕಾಲೊನಿಯಲ್ಲಿ ಭಾನುವಾರ ಸಂಜೆ ಬಾಲಕನ ಮೇಲೆ ಹಂದಿಗಳು ದಾಳಿ ನಡೆಸಿದ್ದರಿಂದ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
 
ಶ್ರವಣಕುಮಾರ ಶಿವರೆಡ್ಡಿ ಕುರಿ ಗಾಯಗೊಂಡ ಬಾಲಕ. ‘ಮನೆಯೊಳಗೆ ಬರುತ್ತಿದ್ದ ಹಂದಿಯನ್ನು ಓಡಿಸಲು ಮೊಮ್ಮಗನಿಗೆ ಹೇಳಿದೆ. ಆತ ಕಲ್ಲು ಎಸೆಯುತ್ತಿದ್ದಂತೆ ಗುಂಪುಗೂಡಿದ ಹಂದಿಗಳು ಏಕಾಏಕಿ ದಾಳಿ ನಡೆಸಿ ಕಚ್ಚಿದವು’ ಎಂದು ಬಾಲಕನ ಅಜ್ಜಿ ಅಯ್ಯಮ್ಮ ಕುರಿ ತಿಳಿಸಿದರು.
 
‘ಹಂದಿ ದಾಳಿಯಿಂದ ಶ್ರವಣಕುಮಾರ ಮೈತುಂಬ ಗಾಯಗಳಾಗಿವೆ. ಯಾವುದೇ ಅಪಾಯ ಇಲ್ಲ. ಆದಾಗ್ಯೂ ಕೂಡ ನಾಯಿ ಸೇರಿದಂತೆ ಇತರೆ ಪ್ರಾಣಿಗಳು ಕಚ್ಚಿದಾಗ ನೀಡುವ ಚಿಕಿತ್ಸೆಯನ್ನು 5 ಹಂತದಲ್ಲಿ ನೀಡುವುದು ಸೂಕ್ತ. ಗಾಯ ಮಾಯಲು ರೋಗನಿರೋಧಕ ಔಷಧಿ, ಮಲಾಮು ನೀಡಲಾಗಿದೆ’ ಎಂದು ಮಕ್ಕಳ ತಜ್ಞ ಡಾ. ಡಿ.ಎಚ್‌. ಕಡದಳ್ಳಿ ಹೇಳಿದರು.
 
‘ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಮನೆಯೊಳಗೆ ನುಗ್ಗುತ್ತಿವೆ. ಮಕ್ಕಳು ಆಟ ಆಡಲು ಹೋದಾಗ ಇಂತಹ ಪ್ರಕರಣಗಳು ಸಾಕಷ್ಟು ನಡೆದಿವೆ. ಹಂದಿ ಸಾಕಾಣಿಕೆ ಮಾಡಿದವರು ಹಾಗೂ ಪುರಸಭೆ ಆಡಳಿತ ಮಂಡಳಿ ಆಯಕಟ್ಟಿನ ಸ್ಥಳಗಳಲ್ಲಿ ಮಾತ್ರ ಹಂದಿಗಳ ಸಾಕಾಣಿಕೆಗೆ ಅವಕಾಶ ಮಾಡಿಕೊಡಬೇಕು’ ಎಂದು ಪಾಲಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.