ADVERTISEMENT

ಹಂದಿ ಹಾವಳಿಗೆ ನೆಮ್ಮದಿ ಕಳೆದುಕೊಂಡು ಜನ

ಪಿ.ಹನುಮಂತು
Published 4 ಸೆಪ್ಟೆಂಬರ್ 2017, 6:45 IST
Last Updated 4 ಸೆಪ್ಟೆಂಬರ್ 2017, 6:45 IST
ರಾಯಚೂರಿನ ಬಂಗಿಕುಂಟಾ ಬಡಾವಣೆಯ ರಸ್ತೆ ಬದಿಯಲ್ಲಿ ಕಸವನ್ನು ಚೆಲ್ಲಾಪಿಲ್ಲಿ ಮಾಡುತ್ತಿರುವ ಹಂದಿಗಳ ಹಿಂಡು
ರಾಯಚೂರಿನ ಬಂಗಿಕುಂಟಾ ಬಡಾವಣೆಯ ರಸ್ತೆ ಬದಿಯಲ್ಲಿ ಕಸವನ್ನು ಚೆಲ್ಲಾಪಿಲ್ಲಿ ಮಾಡುತ್ತಿರುವ ಹಂದಿಗಳ ಹಿಂಡು   

ರಾಯಚೂರು: ನಗರದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು, ಎತ್ತ ಕಡೆ ನೋಡಿದರೂ ಹಂದಿಗಳದ್ದೇ ಕಾಟ ಎನ್ನುವಂತಾಗಿದೆ. ಹಂದಿಗಳ ಹಾವಳಿ ತಡೆಗಟ್ಟಲು ನಗರಸಭೆ ಕ್ರಮ ಜರುಗಿಸದ ಪರಿಣಾಮ ಸಾರ್ವಜನಿಕರು ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿದೆ.

ನಗರದ ಗಲ್ಲಿ ಗಲ್ಲಿಗಳು ಸೇರಿದಂತೆ ಬಡಾವಣೆಯ ರಸ್ತೆಗಳು, ಸಾರ್ವಜನಿಕ ಪ್ರದೇಶಗಳು, ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ಇತರೆ ಪ್ರದೇಶಗಳು ಹಂದಿಗಳಿಗೆ ಆಶ್ರಯ ತಾಣವಾಗಿದ್ದು, ಈ ಪ್ರದೇಶಗಳ ಸುತ್ತಮುತ್ತ ವಾಸಿಸುವ ಜನರು ತೊಂದರೆ ಅನುಭವಿಸು ವಂತಾಗಿದೆ.

ಹಂದಿಗಳ ಸಂಖ್ಯೆ ದಿನಗಳು ಕಳೆದಂತೆ ಹೆಚ್ಚಾಗುತ್ತಿದ್ದು, ಎಪಿಎಂಸಿ ಪ್ರಾಂಗಣ, ಉಸ್ಮಾನಿಯಾ ಮಾರುಕಟ್ಟೆ, ಕೊಳೆಗೇರಿಗಳು, ತಿಮ್ಮಾಪುರ ಪೇಟೆ, ಹರಿಜನವಾಡ, ಮಡ್ಡಿಪೇಟೆ, ಮಾವಿನ ಕೆರೆ ಸುತ್ತಮುತ್ತ ಪ್ರದೇಶ ಸೇರಿದಂತೆ ಮುಂತಾದ ಸ್ಥಳಗಳಲ್ಲೂ ಹಂದಿಗಳ ಹಾವಳಿ ಮಿತಿ ಮೀರಿದ್ದರಿಂದ ಜನರು ರೋಸಿ ಹೋಗಿದ್ದಾರೆ.

ADVERTISEMENT

ಹಂದಿಗಳ ಆಶ್ರಯ ತಾಣವಾಗಿರುವ ಪ್ರದೇಶಗಳಲ್ಲಿ ಸ್ವಚ್ಛತೆ ಮಾಯವಾಗಿದೆ, ಹಂದಿಗಳು ಪರಿಸರವನ್ನು ಅನೈರ್ಮಲ್ಯಗೊಳಿಸಿರುವ ಕಾರಣ ಜನರಿಗೆ ರೋಗ ಭೀತಿ ಕಾಡುತ್ತಿದೆ.

ಕಳೆದ ವಾರದಿಂದ ನಗರದಲ್ಲಿ ಮಳೆಯಾಗುತ್ತಿ ರುವುದರಿಂದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಶೇಖರಣೆಗೊಂಡಿದೆ. ಈ ನೀರಿನಲ್ಲಿ ಹಂದಿಗಳು ಹೊಲಸು ಎಬ್ಬಿಸಿ ದುರ್ನಾತ ಬೀರುವಂತೆ ಮಾಡಿವೆ.

ರಸ್ತೆ ಮಧ್ಯೆಯಲ್ಲಿ ಹಂದಿಗಳು ಅಡ್ಡಾದಿಡ್ಡಿಯಾಗಿ ಅಲೆದಾಡುವುದರಿಂದ ವಾಹನ ಸವಾರರಿಗೂ ತೊಂದರೆ ಆಗಿದೆ. ಮಾವಿನ ಕೆರೆ ಹತ್ತಿರದ ರಸ್ತೆಯಲ್ಲಂತೂ ವಾಹನ ಸವಾರರಿಗೆ ಹಂದಿಗಳು ಅಡ್ಡ ಬಂದು ಅಪಘಾತಗಳು ಸಂಭವಿಸಿವೆ. ಹಂದಿಗಳು ಏಕಾಏಕಿಯಾಗಿ ಅಡ್ಡ ಬಂದಿದ್ದರಿಂದ ವಾಹನ ನಿಯಂತ್ರಣಕ್ಕೆ ಸಿಗದೆ ಬೈಕ್‌ ಸವಾರರು ಬಿದ್ದು ಗಾಯಗೊಂಡಿರುವ ಪ್ರಕರಣಗಳು ಸಹ ನಡೆದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.