ADVERTISEMENT

ಹದಗೆಟ್ಟ ರಸ್ತೆ: ಕುಡಿವ ನೀರಿಗೆ ಸಮಸ್ಯೆ

ಪುನರ್‌ ವಿಂಗಡಣೆಯ ಮಾವಿನಭಾವಿ ಜಿಲ್ಲಾ ಪಂಚಾಯಿತಿ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 7:12 IST
Last Updated 13 ಫೆಬ್ರುವರಿ 2016, 7:12 IST

ಮುದಗಲ್: ಲಿಂಗಸುಗೂರು ವಿಧಾನ ಸಭೆ ಕ್ಷೇತ್ರದ ವ್ಯಾಪ್ತಿಯ ಮಾವಿನಭಾವಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ರಚನೆಯಾಗಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ 28,017 ಮತದಾರರಿದ್ದು,  ಇದರಲ್ಲಿ 14.031 ಪುರುಷರು, 13,985 ಮಹಿಳೆಯರು, ಒಬ್ಬರು ತೃತೀಯ ಲಿಂಗಿ ಇದ್ದಾರೆ. 32 ಮತಗಟ್ಟೆಗಳಿವೆ. ಈ ಕ್ಷೇತ್ರದ ವ್ಯಾಪ್ತಿಯ ಈಚನಾಳ (ಬಿಸಿಎಂ ‘ಎ’), ಗೊರೆಬಾಳ(ಪರಿಶಿಷ್ಟ ಜಾತಿ), ಖೈರವಾಡಗಿ (ಪರಿಶಿಷ್ಟ ಜಾತಿ ಮಹಿಳೆ), ಮಾವಿನಭಾವಿ (ಸಾಮಾನ್ಯ ಮಹಿಳೆ) ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಒಳಪಡುತ್ತಿವೆ.

ಕಳೆದ ಬಾರಿ ಮಾವಿನಭಾವಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿದ್ದ, ಆಮದಿಹಾಳ ಹಾಗೂ ಬನ್ನಿಗೋಳ ತಾಲ್ಲೂಕು ಪಂಚಾಯಿತಿಗಳು ಕ್ಷೇತ್ರ ಪುನರ್‌ ವಿಂಗಡಣೆ ನಂತರ ನಾಗಲಾಪುರ ಜಿಲ್ಲಾ ಪಂಚಾಯಿತಿಗೆ ಒಳಪಟ್ಟಿವೆ.

ಕ್ಷೇತ್ರ ವ್ಯಾಪ್ತಿ ಕೆಲ ಗ್ರಾಮಗಳಲ್ಲಿ ರಸ್ತೆ ಸೌಲಭ್ಯ ಸಮರ್ಪಕವಾಗಿಲ್ಲ. ಅಡವಿಭಾವಿ–ಚಿತ್ತಾಪುರ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಚಿತ್ತಾಪುರ, ಗುಡಿ ಜಾವೂರು, ಬೆಂಡೋಣಿ, ಜಾಹಗೀರ ನಂದಿಹಾಳ, ಆನೆಹೊಸೂರು, ಮರಗಂಟನಾಳ, ಚಿತ್ರನಾಳ, ನೀರಲಕೇರಿ, ಅಡವಿಭಾವಿ ಸೇರಿದಂತೆ ಹತ್ತಾರು ಗ್ರಾಮಗಳ ಜನರಿಗೆ ಅಡವಿಭಾವಿ–-ಚಿತ್ತಾಪುರ ರಸ್ತೆಯೇ ಆಧಾರವಾಗಿದೆ. ಇಲ್ಲಿನ ಜನರು ಸುಮಾರು 10 ವರ್ಷದಿಂದ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ರಸ್ತೆ ಮಧ್ಯೆದಲ್ಲಿ ಕಂಕರ್‌ ಕಲ್ಲುಗಳು ಎದ್ದು ನಿಂತಿವೆ. ರಸ್ತೆ ಬದಿಗೆ ಮುಳ್ಳು ಬೆಳೆದು ನಿಂತಿವೆ. ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಗರ್ಭಿಣಿಯರಿಗೆ ರಸ್ತೆಯಲ್ಲಿಯೇ ಹೆರಿಗೆಯಾದ ಘಟನೆಗಳೂ ಇವೆ. ಕೆಲ ಬಾರಿ ಸಾರಿಗೆ ಇಲಾಖೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೆಲ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು ಸಿಗುತ್ತಿಲ್ಲ. ಅರ್ಸೆನಿಕ್‌ ಪ್ಲೋರೈಡ್‌ಯುಕ್ತ ನೀರೇ ಗತಿ.

ಕೃಷ್ಣಾ ನದಿಯ ನಂದವಾಡಗಿ ಏತ ನೀರಾವರಿ ಯೋಜನೆ ಕ್ಷೇತ್ರದ ಖೈರವಾಡಗಿ ಹಾಗೂ ಮಾವಿನಭಾವಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಇದರ ಸೌಲಭ್ಯ ಪಡೆಯುತ್ತಿವೆ. ಕಾಂಗ್ರೆಸ್ ಪಕ್ಷನಿಂದ ಆನೆಹೊಸೂರು ಗ್ರಾಮದ ಡಿ.ಜಿ.ಗುರಿಕಾರ್‌, ಜೆಡಿಎಸ್‌ ಪಕ್ಷದಿಂದ ಸಂಗಣ್ಣ ಭೀಮಪ್ಪ, ಬಿಜೆಪಿಯಿಂದ ಬಸವರಾಜ ಲಕ್ಷ್ಮಣ, ಪಕ್ಷತರಾಗಿ ಮಲ್ಲಪ್ಪ ಹನುಮಪ್ಪ ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ವಂಚಿತರ ಅಸಮಧಾನದ ಆತಂಕ ಹೆಚ್ಚಾಗಿದೆ. ಇದರ ಲಾಭ ಪಡೆಯಲು ಜೆಡಿಎಸ್ ಸಿದ್ಧತೆ ನಡೆಸಿದೆ. ಬಿಜೆಪಿಗೆ ಹಿರಿಯ ಮುಖಂಡರ ಕೊರತೆ ಕಾಡುತ್ತಿದೆ. 

***
ರಸ್ತೆ, ಸಾರಿಗೆ ಸೌಲಭ್ಯ ಹಾಗೂ ಕುಡಿವ ನೀರಿನ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಉತ್ತಮ.
-ಮಲ್ಲಣ್ಣ,
ಹೊಸೂರು ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.