ADVERTISEMENT

ಹುಡಾ: ರಸ್ತೆ ವಿಸ್ತರಣೆ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:33 IST
Last Updated 16 ಫೆಬ್ರುವರಿ 2017, 6:33 IST
ಸಿಂಧನೂರು:  ತಾಲ್ಲೂಕಿನ ಹುಡಾ ಗ್ರಾಮದಲ್ಲಿ ವೆಂಕಟೇಶ್ವರ ಕ್ಯಾಂಪ್‌ನಿಂದ ಸಿಂಗಾಪುರ ಗ್ರಾಮದವರೆಗಿನ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹಂಪನಗೌಡ ಬಾದರ್ಲಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.
 
ನಂತರ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್ ಯೋಜನೆ ಅಡಿಯಲ್ಲಿ ₹8.50 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ವೆಂಕಟೇಶ್ವರ ಕ್ಯಾಂಪ್‌ನಿಂದ ಸಿಂಗಾಪುರವರೆಗಿನ ರಸ್ತೆಯನ್ನು ಐದುವರೆ ಮೀಟರ್ ಅಗಲೀಕರಣ ಮಾಡಲಾಗುವುದು ಎಂದರು.
 
ಕಳೆದ ವರ್ಷ ಅಕಾಲಿಕ ಮಳೆಯಿಂದ ಬೆಳೆನಷ್ಟ ಅನುಭವಿಸಿದ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹341 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಸಲುವಾಗಿ ಪಂಚಾಯಿತಿ ವ್ಯವಸ್ಥೆಯನ್ನು ವಿಕೇಂದ್ರಿಕರಣಗೊಳಿಸಿದ ಶ್ರೇಯಸ್ಸು ಸಚಿವ ಎಚ್.ಕೆ.ಪಾಟೀಲ, ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
 
ರಸ್ತೆ ಅಗಲೀಕರಣಕ್ಕಾಗಿ ಕೈಗೆತ್ತಿಕೊಳ್ಳಲಾಗುವ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಬಾದರ್ಲಿ ಅವರು ಮನವಿ ಮಾಡಿದರು. 
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಪರಮೇಶಪ್ಪ, ರೌಡಕುಂದ ಜಿ.ಪಂ.ಸದಸ್ಯ ಬಸವರಾಜ ಹಿರೇಗೌಡ ಮಾತನಾಡಿದರು. ಟಿಎಪಿಸಿಎಂಎಸ್‌ ಅಧ್ಯಕ್ಷ ವೆಂಕಟರಡ್ಡಿ ಗಾಳಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್, ಮುಖಂಡರಾದ ಸರ್ವೋತ್ತಮರಡ್ಡಿ, ಕುಮಾರಸ್ವಾಮಿ ಕಂಬಳಿಮಠ, ರಾಜುಗೌಡ ಬಾದರ್ಲಿ, ಪಂಪಾರಡ್ಡಿ, ವೀರನಗೌಡ, ಶಂಕರಗೌಡ ಸಿಂಗಾಪುರ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.