ADVERTISEMENT

‘ಅಗಸೆ’ ಪೌಷ್ಟಿಕ ಆಹಾರ: ಡಾ.ಮೌನೇಶ್ವರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 8:53 IST
Last Updated 30 ಜುಲೈ 2014, 8:53 IST

ರಾಯಚೂರು: ಅಗಸೆ ಸಸ್ಯಾಹಾರಿ­ಗಳಿಗೆ ಒಂದು ಉತ್ತಮ ಪೌಷ್ಟಿಕ ಪರ್ಯಾಯ ಆಹಾರ. ಕೀಲು ನೋವು ನಿವಾರಣೆ, ನೆನಪಿನ ಶಕ್ತಿ ವೃದ್ಧಿಗೆ ಸಹಕಾರಿ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದ ತಜ್ಞೆ ಡಾ. ಮೌನೇಶ್ವರಿ ಹೇಳಿದರು.

ರಾಯಚೂರು ತಾಲ್ಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿ ಈಚೆಗೆ  ನವದೆಹಲಿ ಜೈವಿಕ ತಂತ್ರಜ್ಞಾನ ಇಲಾಖೆ, ಅಖಿಲ ಭಾರತ ಸಮನ್ವಯ ಸಂಶೋಧನೆ ಅಗಸೆ ಯೋಜನೆ, ಕೃಷಿ ವಿಜ್ಞಾನ ಕೇಂದ್ರ ಹಾಗೈ ಕೃಷಿ ವಿಶ್ವವಿದ್ಯಾಲಯ ಆಶ್ರಯದಲ್ಲಿ ರಾಯಚೂರಿನ ಕೃಷಿ ಮಹಾವಿದ್ಯಾಲ­ಯದ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಏರ್ಪಡಿಸಿದ್ದ ‘ಅಗಸೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ತರಬೇತಿ’ ಕಾರ್ಯಕ್ರಮ­ದಲ್ಲಿ ಮಾತನಾಡಿದರು.

ಮೀನಿನ ಪೌಷ್ಟಿಕತೆಯಷ್ಟೇ ಪೌಷ್ಟಿಕ ಅಂಶಗಳು ಅಗಸೆಯಲ್ಲಿ ಇವೆ. ಸಸ್ಯಾ­ಹಾರಿ­ಗಳಿಗೆ ಇದು ಅತ್ಯುಪಯುಕ್ತ. ಸ್ವಸಹಾಯ ಸಂಘಗಗಳಿಗೆ ಅಗಸೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ­ಕೆಯು ಒಂದು ಆದಾಯ ಚಟುವಟಿಕೆಯಾಗಿ ಆಸರೆಯಾಗುತ್ತದೆ ಎಂದು  ಹೇಳಿದರು.

ಅಖಿಲ ಭಾರತ ಸಮನ್ವಯ ಸಂಶೋಧನೆ ಅಗಸೆ ಯೋಜನೆ ವಿಜ್ಞಾನಿ ಡಾ.ಎಸ್.ಎ.ಬಿರಾದಾರ ಅವರು ಬೇಸಾಯ ತಾಂತ್ರಿಕತೆಗಳ ಬಗ್ಗೆ ವಿವರ ನೀಡಿದರು.

ಕೃಷಿ ಮಹಾವಿದ್ಯಾಲಯದ ತಜ್ಞರಾದ ಡಾ.ಶಕುಂತಲಾ ಅವರು, ಅಗಸೆಯ ಬೀಜೋತ್ಪಾದನೆ ಹಾಗೂ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯವಂತ ಮಗು ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.