ADVERTISEMENT

ಮಹಿಳಾ ಪದವಿ ಕಾಲೇಜು ನಿರ್ಮಾಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 7:05 IST
Last Updated 7 ಫೆಬ್ರುವರಿ 2018, 7:05 IST

ರಾಯಚೂರು: ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಕೂಡಲೇ ನಿವೇಶನ ಗುರುತಿಸಿ ಕಟ್ಟಡ ಕೆಲಸ ಆರಂಭಿಸಬೇಕು ಎನ್ನುವುದು ಸೇರಿ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮಹಿಳಾ ಪದವಿ ಕಾಲೇಜಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ವಿದ್ಯಾರ್ಥಿನಿಯರಿಗೆ ಅಗತ್ಯ ಮೂಲ ಸೌಕರ್ಯ ಇಲ್ಲ. ಹೀಗಾಗಿ ಪ್ರತಿನಿತ್ಯ ತೊಂದರೆ ಎದುರಿಸುತ್ತಿದ್ದಾರೆ. ನಗರದಲ್ಲಿ ಕಾಲೇಜಿಗೆ ಸ್ವಂತ ಕಟ್ಟಡ ಕೊರತೆ ಇರುವುದರಿಂದ ಸರ್ಕಾರಿ ಬಾಲಕರ ಪದವಿ ಕಾಲೇಜಿನ ಕಟ್ಟಡದ ಕೆಲವು ಕೊಠಡಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವ್ಯವಸ್ಥೆ ಮುಂದುವರಿಸುವುದು ಸರಿಯಲ್ಲ. ಪ್ರತ್ಯೇಕ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ನಗರ ಪ್ರದೇಶದಲ್ಲಿ ಸ್ಥಳ ಗುರುತಿಸಿ ಕಟ್ಟಡ ನಿರ್ಮಿಸುವುದಕ್ಕೆ ಜಿಲ್ಲಾಧಿಕಾರಿಗಳು ಮುತೂವರ್ಜಿ ವಹಿಸಬೇಕು. ಸದ್ಯದ ಕಾಲೇಜಿನಲ್ಲಿ ಅಗತ್ಯ ಮೂಲ ಸೌಕರ್ಯಗಳಾದ ಶೌಚಾಲಯ, ವಿದ್ಯುತ್, ಪಿಠೋಪಕರಣ, ಗ್ರಂಥಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯ ಸ್ಥಾಪಿಸಬೇಕು. ಗ್ರಂಥಾಲಯ ಮತ್ತು ಪುಸ್ತಕ ವಿತರಿಸಬೇಕು. ಕ್ರೀಡಾ ಸಾಮಾಗ್ರಿ ಒದಗಿಸಬೇಕು ಎಂದರು.

ADVERTISEMENT

ಚೇತನಾ ಬನಾರೆ, ಬಿ.ಆರ್. ಅಪರ್ಣಾ, ಪ್ರಮೋದ ಕುಮಾರ, ಸಲೀಂ, ವೀಣೇಶ್, ವೆಂಕಟ ಸ್ವಾಮಿ, ವಿಜಯಲಕ್ಷ್ಮೀ, ವೆಂಕಟಲಕ್ಷ್ಮೀ, ಮುನಿಯಮ್ಮ, ರಾಧಾ, ಸರೋಜ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.