ADVERTISEMENT

ಸಮರ್ಪಕವಾಗಿ ಮಾಸಾಶನ ತಲುಪಿಸಲು ಸೂಚನೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಅವರಿಂದ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 13:24 IST
Last Updated 26 ಜುಲೈ 2018, 13:24 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಅವರು ಗುರುವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಅವರು ಗುರುವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು   

ರಾಯಚೂರು: ವೃದ್ಧಾಪ್ಯ ವೇತನ, ಮನಸ್ವಿನಿ, ಅಂಗವಿಕಲರು ಸೇರಿದಂತೆ ಸಾಮಾಜಿಕ ಸುರಕ್ಷತೆ ಯೋಜನೆಯಡಿ ನೀಡುವ ಮಾಸಾಶನಗಳು ಸಮರ್ಪಕವಾಗಿ ಬ್ಯಾಂಕ್‌ ಖಾತೆಗೆ ಜಮಾಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ಆಧಾರ್‌ ಸಂಖ್ಯೆ ಪಡೆದು ಫಲಾನುಭವಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಗುರುವಾರ ಪ್ರಗತಿ ಪರಿಶೀಲನೆ ನಡೆಸಿದರು.

60 ವರ್ಷ ದಾಟಿದವರಿಗೆ ವೃದ್ಧಾಪ್ಯ ವೇತನ ಸಕಾಲಕ್ಕೆ ತಲುಪಬೇಕು. ಒಂದು ಗ್ರಾಮದಲ್ಲಿ ಎಷ್ಟು ಜನರು 60 ವರ್ಷ ಪೂರ್ಣಗೊಳಿಸುತ್ತಿದ್ದಾರೆ ಎನ್ನುವ ಅಂದಾಜು ಮಾಹಿತಿ ಇರಬೇಕು. ಅಂಥವರಿಂದ ಆಧಾರ್‌ ಸಂಖ್ಯೆ ಮತ್ತು ಇತರೆ ದಾಖಲೆಗಳನ್ನು ಪಡೆದುಕೊಳ್ಳಬೇಕು. ಪಿಂಚಣಿ ಅದಾಲತ್‌ ನಿಯಮಿತವಾಗಿ ನಡೆಯಬೇಕು ಎಂದರು.

ADVERTISEMENT

ಸಾರ್ವಜನಿಕರೆಲ್ಲರೂ ಸಾಮಾನ್ಯವಾಗಿ ಬಳಕೆ ಮಾಡುವ ಸ್ಮಶಾನಕ್ಕೆ ಭೂಮಿ ವ್ಯವಸ್ಥೆ ಕಲ್ಪಿಸಬೇಕು. ಜಾತಿವಾರು ಸ್ಮಶಾನ ಮಾಡಿಕೊಳ್ಳುವ ಮನವಿಗಳಿಗೆ ಕಿವಿಗೊಡಬಾರದು. ಸ್ಮಶಾನ ಭೂಮಿಗೆ ಅರ್ಜಿ ಸಲ್ಲಿಸುವವರಿಗೆ ಸೂಕ್ತ ತಿಳಿವಳಿಕೆ ನೀಡಿ. ಸರ್ವೇ ಇಲಾಖೆಯು ನಿಗದಿತ ಗುರಿ ಗಮನದಲ್ಲಿಟ್ಟುಕೊಂಡು ಸರ್ವೇಗಳನ್ನು ಪೂರ್ಣಗೊಳಿಸಬೇಕು. ಪೋಡಿಮುಕ್ತ ಗ್ರಾಮಗಳನ್ನು ನಿರ್ಮಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಫಸಲ ಭಿಮಾ ಯೋಜನೆಯಡಿ ವಿಮಾ ಮಾಡಿಸುವುದಕ್ಕೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿಮಾ ಕಂಪೆನಿಗಳು ಮಾಡಬೇಕಿದ್ದ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಈ ಹಿಂದಿನ ಎರಡು ವರ್ಷ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಕಾಲದಲ್ಲಿ ಬೇರೆ ಬೇರೆ ಕಂಪೆನಿಗಳಿಗೆ ಜಿಲ್ಲೆಯ ವಿಮಾ ಕಂತು ಹೋಗುತ್ತಿತ್ತು. ಈ ವರ್ಷದಿಂದ ಒಂದೇ ಕಂಪೆನಿಯು ಇಡೀ ವರ್ಷ ವಿಮಾ ನಿರ್ವಹಿಸುವಂತೆ ಮಾಡಲಾಗಿದೆ. ಹೀಗಾಗಿ ರೈತರಿಗೆ ವಿಮಾ ಪರಿಹಾರ ಸಕಾಲಕ್ಕೆ ತಲುಪಲಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ/ಪಂಗಡದ ಜನರಿಗೆ ಸ್ಮಶಾನ ಭೂಮಿ ಇಲ್ಲದಿರುವ ಗ್ರಾಮಗಳಲ್ಲಿ ಭೂಮಿ ಖರೀದಿಗಾಗಿ ₨1.5 ಕೋಟಿ ಅನುದಾನ ಬಂದಿತ್ತು. ಅದರಲ್ಲಿ ₨77 ಲಕ್ಷ ವೆಚ್ಚ ಮಾಡಿ, ಸ್ಮಶಾನ ಜಾಗ ಮಾಡಿಕೊಡಲಾಗಿದೆ. ಸರ್ಕಾರಿ ಜಾಗ ಲಭವಿಲ್ಲದ ಕಡೆಗಳಲ್ಲಿ ಮಾತ್ರ ಅನಿವಾರ್ಯವಾಗಿ ಖಾಸಗಿ ಜಮೀನು ಖರೀದಿಸಲು ಅನುದಾನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಮನೆಗಳು ಮತ್ತು ಜಮೀನು ಅಕ್ರಮ–ಸಕ್ರಮ ಮಾಡಿದ ಅರ್ಜಿಗಳ ವಿಲೇವಾರಿಯು ರಾಯಚೂರು ಮತ್ತು ಲಿಂಗಸುಗೂರು ತಾಲ್ಲೂಕುಗಳಲ್ಲಿ ಮಾತ್ರ ಬಾಕಿ ಉಳಿದಿವೆ. ಈ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ವಿಲೇವಾರಿ ಮಾಡಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಭೂ ಮಾಪನ ಇಲಾಖೆಯ ಅಧಿಕಾರಿ ಮಾತನಾಡಿ, ಈ ವರ್ಷ 137 ಗ್ರಾಮಗಳನ್ನು ಪೋಡಿ ಮುಕ್ತ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಅದರಲ್ಲಿ 125 ಗ್ರಾಮಗಳನ್ನು ಪೋಡಿಮುಕ್ತ ಮಾಡಲಾಗಿದೆ. ಬಹಳಷ್ಟು ಕಡೆಗಳಲ್ಲಿ ವ್ಯಾಜ್ಯ ಇರುವುದರಿಂದ ಶೇ 50 ರಷ್ಟು ಮಾತ್ರ ಪೋಡಿ ವಿಲೇವಾರಿ ಸಾಧ್ಯವಾಗುತ್ತಿದೆ. ಸಹೋದರರು ಹಾಗೂ ಇತರೆ ಸಂಬಂಧಿಗಳು ಜಮೀನುಗಳಲ್ಲಿ ಪಾಲು ಮುಂದುವರಿಸುವ ಇಂಗಿತ ವ್ಯಕ್ತಪಡಿಸುತ್ತಾರೆ. ಒಂದು ಜಮೀನಿಗೆ ಒಬ್ಬರೆ ಮಾಲೀಕರು ಎನ್ನುವ ಪರಿಕಲ್ಪನೆಯನ್ನು ಕೆಲವರು ಒಪ್ಪಿಕೊಳ್ಳುತ್ತಿಲ್ಲ. ಪೋಡಿ ಮುಕ್ತಗೊಳಿಸಲು ಕೆಲವು ರೈತರು ಅಸಹಕಾರ ತೋರಿಸಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.