ADVERTISEMENT

ಅರಣ್ಯವಾಸಿಗಳಿಂದ ಅರೆ ಬೆತ್ತಲೆ ಪ್ರತಿಭಟನೆ

ಅಹೋರಾತ್ರಿ ಧರಣಿ, ಸ್ಥಳದಲ್ಲೇ ಅಡುಗೆ ಸಿದ್ಧಪಡಿಸಿದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:56 IST
Last Updated 2 ಫೆಬ್ರುವರಿ 2017, 6:56 IST
ಅರಣ್ಯವಾಸಿಗಳಿಂದ ಅರೆ ಬೆತ್ತಲೆ ಪ್ರತಿಭಟನೆ
ಅರಣ್ಯವಾಸಿಗಳಿಂದ ಅರೆ ಬೆತ್ತಲೆ ಪ್ರತಿಭಟನೆ   

ಕನಕಪುರ: ಅರಣ್ಯ ಹಕ್ಕು ಕಾಯ್ದೆಯಂತೆ ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ಭೂಮಿ ಕೊಡಬೇಕೆಂದು ಒತ್ತಾಯಿಸಿ ಅರಣ್ಯ ವಾಸಿಗಳು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಮರಳವಾಡಿ ಹೋಬಳಿ ಬುಡಗಯ್ಯನದೊಡ್ಡಿ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆಯಿತು.

ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಅರಣ್ಯ ಪ್ರದೇಶಕ್ಕೆ ಸೇರಿದ ಗಡಿ ಗ್ರಾಮಗಳಾದ ಲಿಂಗನಾಪುರ, ಗೊಲ್ಲರದೊಡ್ಡಿ, ಬುಡಗಯ್ಯನದೊಡ್ಡಿ ಗ್ರಾಮದ ಸುಮಾರು 125 ಕುಟುಂಬಗಳು ಅಹೋರಾತ್ರಿ ಪ್ರತಿಭಟನೆ ಕೈಗೊಂಡಿವೆ.  ಸುಮಾರು 40 ವರ್ಷಗಳ ಹಿಂದೆ ಬುಡಗಯ್ಯನದೊಡ್ಡಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಲ್ಲಾ ಕುಟುಂಬಗಳನ್ನು ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌ ಮಾಡಿದ ಸಂದರ್ಭದಲ್ಲಿ ತೆರವುಗೊಳಿಸಲಾಯಿತು. ಬೇರೆ ದಾರಿಯಿಲ್ಲದೆ ಅಲ್ಲಿಂದ ಅಷ್ಟು ಕುಟುಂಬಗಳು ಆ ಪ್ರದೇಶ ಬಿಟ್ಟು ಅರಣ್ಯ ಸಮೀಪವಿದ್ದ ಗ್ರಾಮಗಳಲ್ಲಿ ನೆಲೆಸಿದ್ದೇವೆ, 2006 ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಅರಣ್ಯ ವಾಸಿಗಳಿದ್ದ ಪ್ರದೇಶವನ್ನು ಅವರಿಗೆ ಬಿಟ್ಟುಕೊಡಬೇಕಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

‘125 ಕುಟುಂಬಗಳು ನಮ್ಮ ಭೂಮಿ ನಮಗೆ ಬಿಟ್ಟು ಕೊಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ, ಸರ್ವೇ ಇಲಾಖೆ ಜಂಟಿಯಾಗಿ ಸರ್ವೇ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎರಡು ಬಾರಿ ದಿನ ನಿಗದಿ ಮಾಡಿದ್ದರೂ ಈವರೆಗೂ ಬಂದಿಲ್ಲ. ಆ ಕಾರಣದಿಂದ ನ್ಯಾಯಕ್ಕಾಗಿ ಇಂದು ಕುಟುಂಬ ಸಮೇತ ಪ್ರತಿಭಟನೆಗೆ ಮುಂದಾಗಿದ್ದೇವೆ’ ಎಂದು ಇರುಳಿಗ ಅರಣ್ಯವಾಸಿ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ. ಶಾಲೆಗೆ ಹೋಗುತ್ತಿದ್ದ ಮಕ್ಕಳು, ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ನಮಗೆ ನ್ಯಾಯ ಸಿಗುವ ತನಕ ಇಲ್ಲಿಂದ ಹೋಗುವುದಿಲ್ಲವೆಂದು ಪ್ರತಿಭಟನಾಕಾರರು ತಿಳಿಸಿದರು. ಅಲ್ಲದೆ ಸ್ಥಳದಲ್ಲಿಯೇ ಅಡುಗೆ ಸಿದ್ಧಪಡಿಸಿಕೊಂಡರು.

ಪ್ರತಿಭಟನೆಯ ವಿಚಾರ ತಿಳಿದ ಅರಣ್ಯ ಇಲಾಖೆ ವನ್ಯ ಜೀವಿ ವಿಭಾಗದ ಆರ್‌.ಎಫ್‌.ಒ.ಮಹಮ್ಮದ್ ಮನ್ಸೂರ್‌, ಕಂದಾಯ ಇಲಾಖೆಯ ಆರ್‌.ಐ. ಕೃಷ್ಣಪ್ಪ, ಪಿ.ಡಿ.ಒ. ಸತೀಶ್‌ ಸ್ಥಳಕ್ಕೆ ಭೇಟಿ ನೀಡಿ ಗುರುವಾರ ಭೂಮಿಯನ್ನು ಸರ್ವೇ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಅದು ಫಲ ಕೊಡಲಿಲ್ಲ.
  
‘ಅಧಿಕಾರಿಗಳು ಯಾವುದೇ ಭರವಸೆ ಕೊಟ್ಟರೂ ನಾವು ನಂಬುವುದಿಲ್ಲ, ಸರ್ವೆ  ಇಲಾಖೆ ಅಧಿಕಾರಿಗಳು ಬಂದು ಸ್ಥಳದಲ್ಲಿ ಸರ್ವೇ ಕಾರ್ಯ ಶುರುಮಾಡುವ ತನಕ ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ’ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.