ADVERTISEMENT

ಉತ್ತಮ ಕುಟುಂಬ ವ್ಯವಸ್ಥೆ ಇಲ್ಲ: ಬೇಸರ

ಅಧಿಕಾರಿ ಚಿಕ್ಕಪುಟ್ಟೇಗೌಡರಿಗೆ ‘ಹಸನ್ಮುಖಿ’ ಅಭಿನಂದನಾ ಗ್ರಂಥ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 7:49 IST
Last Updated 25 ಮೇ 2017, 7:49 IST

(ಬಿ.ವಿ.ಹಳ್ಳಿ) ಚನ್ನಪಟ್ಟಣ: ಐವತ್ತು ವರ್ಷಗಳ ಹಿಂದಿನ ಗ್ರಾಮೀಣ ಭಾಗದಲ್ಲಿದ್ದ ಕುಟುಂಬ ವ್ಯವಸ್ಥೆ ಮತ್ತು ಉತ್ತಮ ಬಾಂಧವ್ಯಗಳು ಇಂದು ಕಾಣಲಾಗುತ್ತಿಲ್ಲ ಎಂದು ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ವಿಷಾದಿಸಿದರು.

ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಅಧಿಕಾರಿ ಬಿ.ಟಿ.ಚಿಕ್ಕಪುಟ್ಟೇಗೌಡರಿಗೆ 60ರ ಸಂಭ್ರಮದ ಹಸನ್ಮುಖಿ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕುಟುಂಬಗಳು ಗಂಡ, ಹೆಂಡತಿ, ಮಕ್ಕಳಿಗಷ್ಟೆ ಸೀಮಿತವಾಗುತ್ತಿವೆ ಎಂದರು.

ಕವಿ ಪ್ರೊ.ಎಲ್.ಎನ್. ಮುಕುಂದರಾಜ್ ಮಾತನಾಡಿ, ಸಾಹಿತ್ಯ ಮತ್ತು ಕೃಷಿಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಾಗ ಸಮಾಜದಲ್ಲಿ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆಎಂದರು.

ವಿ.ಸಿ.ಫಾರಂನ ಕೃಷಿ ವಿಜ್ಙಾನಿ ಡಾ.ಎಂ.ಅತಿಕ್ಕೂರ್ ರೆಹಮಾನ್ ಸಾವಯವ ಹಾಗೂ ಸಿರಿಧಾನ್ಯಗಳ ಕೃಷಿ ವಿಷಯವಾಗಿ ಉಪನ್ಯಾಸ ನೀಡಿ, ಹಿಂದಿನ ಆಹಾರ ಪದ್ಧತಿಯಿಂದ ಮನುಷ್ಯನಲ್ಲಿ ಮಾನಸಿಕ ಮತ್ತು ಬೌದ್ಧಿಕ ಪ್ರಬುದ್ಧತೆಯ ಮಟ್ಟ ಹೆಚ್ಚಿನ ಪ್ರಮಾಣದಲ್ಲಿತ್ತು. ಆದರೆ, ಇಂದು ರಾಸಾಯನಿಕ ಗೊಬ್ಬರ ಬಳಸಿ ಬೆಳೆಯುತ್ತಿರುವ ಬೆಳೆಗಳನ್ನು ಜನರು ಉಪಯೋಗಿಸುತ್ತಿದ್ದು ಅದರಿಂದ ಅನೇಕ ರೋಗರುಜಿನಗಳನ್ನು ತಂದುಕೊಳ್ಳುತ್ತಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಅರ್ಚಕರಹಳ್ಳಿ ಅಂಧರ ಶಾಲೆಯ ಅನ್ನದಾನೇಶ್ವರಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಡಾ.ಬೈರಮಂಗಲ ರಾಮೇಗೌಡ, ದೊಡ್ಡರಸಿನಕೆರೆ ಮಾಯಪ್ಪ, ವಿಶ್ರಾಂತ ಐಜಿಪಿ ಕೆ.ಅರ್ಕೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು, ಹಾಸನ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಉದಯರವಿ, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಭಾಗವಹಿಸಿದ್ದರು.

ಬಿ.ಟಿ.ಚಿಕ್ಕಪುಟ್ಟೇಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಗಾಯಕರಾದ ಎಚ್.ಶಿವರಾಮಯ್ಯ, ಶಾರದಾ ನಾಗೇಶ್, ಹೊನ್ನಿಗನಹಳ್ಳಿ ಸಿದ್ದರಾಜು, ಚಂದ್ರಾಜು, ಕೆಂಗಲ್ ವಿನಯ್ ಕುಮಾರ್ ಗೀತಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.