ADVERTISEMENT

‘ಉತ್ತಮ ಹವ್ಯಾಸಗಳಿಂದ ಯಶಸ್ವಿ ಬದುಕು: ಪುಷ್ಪಾ

ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಾರೋಪ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:52 IST
Last Updated 30 ಜನವರಿ 2017, 7:52 IST
ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಕವಯಿತ್ರಿ ಡಾ.ಎಚ್.ಎಲ್‌. ಪುಷ್ಪಾ ಬಹುಮಾನ ವಿತರಿಸಿದರು
ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಕವಯಿತ್ರಿ ಡಾ.ಎಚ್.ಎಲ್‌. ಪುಷ್ಪಾ ಬಹುಮಾನ ವಿತರಿಸಿದರು   

ರಾಮನಗರ: ‘ಪಠ್ಯಪುಸ್ತಕಗಳ ಓದಿನೊಂದಿಗೆ ಹಾಡುವ, ನೃತ್ಯ ಮಾಡುವ, ಬರೆಯುವ ಉತ್ತಮ ಹವ್ಯಾಸಗಳಿದ್ದಲ್ಲಿ ಮಾತ್ರ ಬದುಕಿನ ಸವಾಲು  ಸಮರ್ಥವಾಗಿ ಎದುರಿಸಿ ಯಶಸ್ವಿಯಾಗಲು ಸಾಧ್ಯ’ ಎಂದು ಕವಯಿತ್ರಿ ಡಾ.ಎಚ್.ಎಲ್.ಪುಷ್ಪಾ ಅಭಿಪ್ರಾಯಪಟ್ಟರು.

ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ 2016–17 ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೇವಲ ಓದಿಗಷ್ಟೆ ಸೀಮಿತರಾದ ಐಟಿ, ಬೀಟಿ ಕಂಪೆನಿಗಳಲ್ಲಿ ದುಡಿಯುವವರು ಬದುಕಿನ ಅನಿರೀಕ್ಷಿತ ತಿರುವುಗಳಿಗೆ ಅಂಜಿ ಖಿನ್ನತೆಗೆ ಒಳಗಾಗಿ, ಹತಾಶರಾಗುತ್ತಾರೆ. ದುಡಿಮೆಯೊಂದಿಗೆ, ಕೆಲವು ವಿಶೇಷ ಹವ್ಯಾಸಗಳನ್ನು ಹೊಂದಿದ್ದರೆ ಬದುಕನ್ನು ಎದುರಿಸುವ ಶಕ್ತಿ ಲಭ್ಯವಾಗುತ್ತದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳಲ್ಲಿ ಓದು ಕ್ಷೀಣವಾಗಿ ನೋಡುವಿಕೆ ಹೆಚ್ಚುತ್ತಿದೆ. ಒಬ್ಬ ವಿಜ್ಞಾನಿಯ ಬಗೆಗೆ ಓದಿದಾಗ ನಾನೂ ವಿಜ್ಞಾನಿಯಾಗಲು ಸಾಧ್ಯವೇ, ವಿಜ್ಞಾನಿಯಾಗಬೇಕಾದರೆ ಏನೆಲ್ಲಾ ಪ್ರಯೋಗ ಮಾಡಬೇಕು, ಇದು ನನ್ನಿಂದ ಸಾಧ್ಯವಾಗುತ್ತಾ ಎನ್ನುವ ಪ್ರಶ್ನೆಗಳಿಗೆ  ಉತ್ತರ ಕಂಡುಕೊಳ್ಳುವಾಗ ವಿಜ್ಞಾನಿಯಾಗುವುದು ಕಷ್ಟವಾಗುವುದಿಲ್ಲ’ ಎಂದರು.
‘ಮಾಧ್ಯಮಗಳು ಬೇಡದ ವಿಚಾರಗಳನ್ನು ಮೇಲಿಂದ ಮೇಲೆ ಪ್ರಸಾರ ಮಾಡುತ್ತಿವೆ. ಸರಕುಗಳ ಮಾರಾಟಕ್ಕೆ ಮಹಿಳೆಯರನ್ನೇ ಕೇಂದ್ರೀಕರಿಸಿವೆ. ಜಾಹೀರಾತುಗಳಲ್ಲಿ ಮಹಿಳೆಯರನ್ನು ವ್ಯಾಪಕವಾಗಿ ಬಳಸಿ ವ್ಯಾಪಾರ ಹೆಚ್ಚಿಸಿಕೊಳ್ಳುವ ಹುನ್ನಾರ ನಡೆಸಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಣ್ಣ ಘಟನೆಗಳನ್ನು ಎಳೆದು ಎಳೆದು ಅನಗತ್ಯ ವಾಗ್ವಾದಗಳನ್ನು ಹುಟ್ಟಿಸುತ್ತಿವೆ. ನಿಮ್ಮ ಗ್ರಹಿಕೆ, ನಿಮ್ಮತನವನ್ನು ಮಾಧ್ಯಮಗಳು ಕಿತ್ತುಕೊಳ್ಳುತ್ತಿವೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಧ್ಯಮಗಳನ್ನು ಮಿತಬಳಕೆ ಮಾಡುವುದರತ್ತ ಗಮನಹರಿಸ ಬೇಕಾಗಿದೆ’ ಎಂದು ತಿಳಿಸಿದರು.

ಸಾಂಸ್ಕೃತಿಕ  ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಸಂಸ್ಥಾಪಕರಾದ ಕೆ.ಎನ್.ಪುಟ್ಟಮ್ಮ ಹತ್ವಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎನ್.ಪುಷ್ಪಾಲತಾ, ಜಂಟಿ ಕಾರ್ಯದರ್ಶಿ ಉಷಾ ಆಚಾರ್ಯ, ಶೈಕ್ಷಣಿಕ ಸಂಯೋಜಕ ಕೆ.ಆರ್. ಕೃಷ್ಣಮೂರ್ತಿ, ಪ್ರಾಚಾರ್ಯರಾದ ಬಿ.ಗೋಪಾಲ್, ಕೆ.ಎಂ.ಬೈರೇಶ್, ಉಪನ್ಯಾಸಕರಾದ ಜಿ.ಶಿವಣ್ಣ ಕೊತ್ತೀಪುರ, ಪಿ. ಮಂಜುಳಾ, ಡಾ.ವೆಂಕಟಾಚಲಯ್ಯ, ಜಿ.ಎಂ. ವೀಣಾ, ಶಶಿಕಲಾ, ಶಾರದಾ, ಶ್ವೇತಾ, ರುದ್ರಸ್ವಾಮಿ, ಸರಸ್ವತಿ, ಗೀತಾರಾಣಿ, ಎಸ್.ಪಿ.ಹೂದ್ಲೂರು, ಮಹದೇವ್ ಇದ್ದರು.

***

ಓದುವ ಸುಖ ನೋಡುವಿಕೆಗಿಂತ ಹಿತವಾಗಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದಿದ್ದಲ್ಲಿ ಅನನುಭವ ಕಾಡುತ್ತದೆ
- ಡಾ.ಎಚ್.ಎಲ್‌. ಪುಷ್ಪಾ, ಕವಯಿತ್ರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.