ADVERTISEMENT

ಉದ್ಯೋಗ ಖಾತ್ರಿ: ಸಮರ್ಪಕ ಅನುಷ್ಠಾನಕ್ಕೆ ಸೂಚನೆ

ಸದ್ಬಳಕೆಯಾಗದ ಅನುದಾನ: ಪಿಡಿಒಗಳಿಗೆ ತಾ.ಪಂ. ಅಧ್ಯಕ್ಷರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 9:26 IST
Last Updated 19 ಸೆಪ್ಟೆಂಬರ್ 2014, 9:26 IST

ಕನಕಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಉದ್ಯೋಗ ದೊರಕಿಸಿಕೊಡಲು ಪ್ರತಿ ಕುಟುಂಬದಲ್ಲೂ ಕಡ್ಡಾಯ ಜಾಬ್‌ ಕಾರ್ಡುಗಳನ್ನು ಮಾಡಬೇಕು. ಜಾಬ್‌ ಕಾರ್ಡ್‌ ಹೊಂದಿರುವವರಿಗೆ ವೈಯಕ್ತಿಕ ಕಾಮಗಾರಿಗಳನ್ನು ನೀಡಬೇಕು ಇಲ್ಲವಾದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಸ್‌.ಉಮೇಶ್‌ ಎಚ್ಚರಿಕೆ ನೀಡಿದರು.  

ತಾಲ್ಲೂಕಿನಲ್ಲಿ ಬರುವ ಎಲ್ಲಾ 43 ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷರು ಸೋಮವಾರದಿಂದ ಪ್ರವಾಸ ಕೈಗೊಂಡಿರುವ ಕಾರಣದಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನರೇಗಾ ಯೋಜನೆ ಅಡಿ ಕೋಟ್ಯಂತರ ರೂಪಾಯಿ ಅನುದಾನ ಪಂಚಾಯಿತಿಗೆ ಹರಿದು ಬರುತ್ತಿದೆ. ಆದರೆ, ಕೆಲವು ಪಂಚಾಯಿತಿಗಳು ಉತ್ತಮ ಪ್ರಗತಿ ಸಾಧಿಸಿದರೆ, ಇನ್ನು ಕೆಲವು ಪಂಚಾಯಿತಿಗಳು ಯೋಜನೆಯನ್ನು ಸಮರ್ಪಕವಾಗಿ ಬಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿವೆ. ಅದಕ್ಕೆ ಏನು ಕಾರಣ ಎಂಬುದನ್ನು ತಿಳಿಯಲು ಮತ್ತು ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ತಾವು ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರವಾಸ ಕೈಗೊಂಡಿರುವುದಾಗಿ ಅವರು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಉಷಾ ಅವರು ಮಾತನಾಡಿ ಪಂಚಾಯಿತಿಗಳಲ್ಲಿ ಸಮರ್ಪಕವಾಗಿ ಕೆಲಸಗಳು ಅಗುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ. ಕರವಸೂಲಿಗಾರರು ಕಂದಾಯವನ್ನು ಸರಿಯಾಗಿ ವಸೂಲಿ ಮಾಡುತ್ತಿಲ್ಲ. ಅಂತಹವರನ್ನು ಕೆಲಸದಿಂದ ತೆಗೆದು ಬೇರೆಯೊಬ್ಬರಿಗೆ ಅವಕಾಶ ಮಾಡಿ ಎಂದು ಅವರು ಹೇಳಿದರು.

ಒಂದು ದಿನಕ್ಕೆ 5 ಗ್ರಾಮ ಪಂಚಾಯಿತಿಗಳಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲಾಗುವುದು ಎಂದು ಅವರು ಹೇಳಿದರು.
ಒಂದು ಗ್ರಾಮ ಪಂಚಾಯಿತಿಯಲ್ಲಿ ಒಂದು ಮಾದರಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ಅಭಿವೃದ್ಧಿ ಸಾಧಿಸಬೇಕೆಂದು ಅವರು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಬಯೋ ಮೆಟ್ರಿಕ್‌ ಅಳವಡಿಸಿದ್ದರೂ ಅದನ್ನು ಬಳಕೆ ಮಾಡುತ್ತಿಲ್ಲ. ಪ್ರತಿಯೊಂದು ಗ್ರಾಮ ಪಂಚಾಯಿತಿಯವರು ಕಡ್ಡಾಯವಾಗಿ ಬಯೋಮೆಟ್ರಿಕ್‌ ಬಳಸಬೇಕೆಂದು ಅವರು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗಯ್ಯ, ಸಹಾಯಕ ನಿರ್ದೇಶಕ ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.