ADVERTISEMENT

ಎರಡು ಗಂಟೆ ನಿಂತ ರೈಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:26 IST
Last Updated 9 ನವೆಂಬರ್ 2017, 9:26 IST

ರಾಮನಗರ: ಎಂಜಿನ್‌ನಲ್ಲಿನ ದೋಷದಿಂದಾಗಿ ಮೈಸೂರಿನಿಂದ ಯಶವಂತ ಪುರಕ್ಕೆ ತೆರಳುತ್ತಿದ್ದ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ಬುಧವಾರ ಎರಡು ಗಂಟೆಗೂ ಹೆಚ್ಚು ಕಾಲ ಇಲ್ಲಿನ ರೈಲು ನಿಲ್ದಾಣದಲ್ಲಿಯೇ ನಿಂತಿತು. ಇದರಿಂದ ನೂರಾರು ಪ್ರಯಾಣಿಕರು ಪರದಾಡುವಂತೆ ಆಯಿತು.

ಬೆಳಿಗ್ಗೆ 10.20ರ ಸುಮಾರಿಗೆ ರೈಲು ನಿಲ್ದಾಣಕ್ಕೆ ಬಂದಿದ್ದು, ಎಂಜಿನ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಪ್ರಯಾಣ ಮುಂದುವರಿಸಲು ಆಗಲಿಲ್ಲ. ಕಾದು ಸುಸ್ತಾದ ಪ್ರಯಾಣಿಕರು ಕೆಳಗಿಳಿದು ಬೇರೆ ರೈಲಿನಲ್ಲಿ ಪ್ರಯಾಣ ಮುಂದುವರಿಸಿದರು. ಇನ್ನೂ ಕೆಲವರು ಬಸ್‌ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ರಸ್ತೆ ಪ್ರಯಾಣ ಆರಂಭಿಸಿದರು. ಇನ್ನೂ ಕೆಲವರು ರೈಲಿನೊಳಗೇ ಕಾದು ಸುಸ್ತಾದರು.

ಬೆಳಿಗ್ಗೆ 8.20ಕ್ಕೆ ಮೈಸೂರಿನಿಂದ ಹೊರಟ ರೈಲಿನ ಎಂಜಿನ್‌ನಲ್ಲಿ ಮದ್ದೂರು ಬಳಿಯೇ ತಾಂತ್ರಿಕ ದೋಷ ಕಾಣಿಸಕೊಂಡಿದೆ ಎನ್ನಲಾಗಿದ್ದು, ಲೋಕೋಪೈಲಟ್‌ಗಳು ನಿಧಾನವಾಗಿ ಚಲಾಯಿಸಿಕೊಂಡು ಬಂದು ರಾಮನಗರ ನಿಲ್ದಾಣಕ್ಕೆ ತಂದು ನಿಲ್ಲಿಸಿದರು. ಹೀಗಾಗಿ ಬೆಳಿಗ್ಗೆ 9.50ಕ್ಕೆ ಇಲ್ಲಿಗೆ ಬರಬೇಕಿದ್ದ ರೈಲು 10.20ಕ್ಕೆ ಬಂದು ತಲುಪಿತು.

ADVERTISEMENT

ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ನಿಂತಿದ್ದು, ಒಟ್ಟು ನಾಲ್ಕು ಪ್ಲಾಟ್‌ಫಾರ್ಮ್‌ಗಳು ಇದ್ದ ಕಾರಣ ಉಳಿದ ರೈಲುಗಳ ಸಂಚಾರಕ್ಕೆ ಅಡಚಣೆ ಆಗಲಿಲ್ಲ. ಮಧ್ಯಾಹ್ನ 12.30ರ ಸುಮಾರಿಗೆ ಬೇರೊಂದು ಎಂಜಿನ್‌ ಜೋಡಿಸಿದ ಬಳಿಕ ಮಾಲ್ಗುಡಿ ಎಕ್ಸ್‌ಪ್ರೆಸ್‌ ಪ್ರಯಾಣವನ್ನು ಮುಂದುವರಿಸಿತು.

ಪ್ರಯಾಣಿಕರ ಆಕ್ರೋಶ: ಎಂಜಿನ್ ಕ್ಷಮತೆ ಪರೀಕ್ಷಿಸಿಕೊಳ್ಳದ ಲೋಕೋಪೈಲಟ್‌ ಹಾಗೂ ರೈಲ್ವೆ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.
‘ಸಮಯಕ್ಕೆ ಸರಿಯಾಗಿ ಹೋಗುತ್ತದೆ ಎಂಬ ಕಾರಣಕ್ಕೆ ನಾವು ರೈಲು ಪ್ರಯಾಣದ ಮೇಲೆ ಅವಲಂಬಿತರಾಗಿರುತ್ತೇವೆ.

ಪ್ರಯಾಣ ಆರಂಭಿಸುವ ಮುನ್ನವೇ ಎಂಜಿನ್‌ ಪರೀಕ್ಷಿಸಿಕೊಂಡಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ. ಇದೀಗ ಎರಡು ಗಂಟೆ ತಡವಾಗಿದ್ದು, ಮುಂದಿನ ಪ್ರಯಾಣವೆಲ್ಲವೂ ಅಸ್ತವ್ಯಸ್ತವಾಗಿದೆ’ ಎಂದು ದೂರಿದರು.

‘ಯಶವಂತಪುರದಲ್ಲಿ ಮಧ್ಯಾಹ್ನ ಮದುವೆ ಇದ್ದು, ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಪ್ರಯಾಣ ತಡವಾಗಬಹುದು ಎನ್ನುವ ಕಾರಣಕ್ಕೆ ರೈಲನ್ನೇರಿದ್ದೆ. ಆದರೆ ಇದೇ ಕೈಕೊಟ್ಟಿದ್ದು, ಇಡೀ ದಿನ ಹಾಳಾಗಿದೆ’ ಎಂದು ಚನ್ನಪಟ್ಟಣ ನಿವಾಸಿ ಕಣ್ಣನ್‌ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.