ADVERTISEMENT

‘ಓದಿನ ಜೊತೆಗೆ ಕೌಶಲ ಅಗತ್ಯ’

ಮಾತೆ ಸಾವಿತ್ರಿ ಬಾ ಫುಲೆ ಚಾರಿಟೆಬಲ್‌ ಟ್ರಸ್ಟ್‌ಯಿಂದ ಜಾನಪದ ಕಲೋತ್ಸವ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 9:36 IST
Last Updated 24 ಜುಲೈ 2017, 9:36 IST

ರಾಮನಗರ: ‘ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಗಮನ ನೀಡಬೇಕು’ ಎಂದು ಎಂ.ಎಚ್‌. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಚ್. ಚಂದ್ರಶೇಖರ್ ಹೇಳಿದರು.

ನಗರದ ಗುರುಭವನದಲ್ಲಿ ಮಾತೆ ಸಾವಿತ್ರಿ ಬಾ ಫುಲೆ ಚಾರಿಟೆಬಲ್‌ ಟ್ರಸ್ಟ್‌ ಭಾನುವಾರ ಹಮ್ಮಿಕೊಂಡಿದ್ದ ಜಾನಪದ ಕಲೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೌಶಲದ ಕೊರತೆಯಿಂದ ಸಾವಿರಾರು ಪದವೀಧರರು ಇಂದು ನಿರುದ್ಯೋಗಿಗಳಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿ ‘ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕಡೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಸಮಾಜದಲ್ಲಿ ಉನ್ನತ ಅಧಿಕಾರಿಗಳಾಗಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು’ ಎಂದು ತಿಳಿಸಿದರು.

‘ಇಂದಿಗೂ ದೇಶದಲ್ಲಿ ಶೇ 50ರಷ್ಟು ಜನ ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ. ಶೇ 60ರಷ್ಟು ಮಂದಿ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಸಮಾಜದಲ್ಲಿನ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಶಿಕ್ಷಣದ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ಮಾತೆ ಸಾವಿತ್ರಿ ಬಾಫುಲೆ  ಚಾರಿಟೆಬಲ್‌ ಟ್ರಸ್ಟಿನ ಅಧ್ಯಕ್ಷ ಎನ್. ನಾಗೇಶ್ ಮಾತನಾಡಿ ‘ಟ್ರಸ್ಟಿನ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಜನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಲೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಮಂಡ್ಯ ಕೃಷ್ಣಮೂರ್ತಿ ಮಾತನಾಡಿ ‘ತಳ ಸಮುದಾಯದ ಹೆಣ್ಣು ಮಕ್ಕಳಿಗಾಗಿ ಸಾವಿತ್ರಿ ಬಾ ಫುಲೆ ಶಾಲೆ ಪ್ರಾರಂಭಿಸಿದರು. ತಳಸಮುದಾಯಗಳಿಗೆ ಇವರು ಮೊಟ್ಟಮೊದಲ ಶಿಕ್ಷಕಿ, ವಿದ್ಯೆಕೊಟ್ಟ ಸರಸ್ವತಿಯಾಗಿದ್ದಾರೆ. ಪತಿ ಜ್ಯೋತಿ ಬಾ ಫುಲೆ ಅವರೊಂದಿಗೆ ಸೇರಿ ವಿದ್ಯೆಯಿಂದ ವಂಚಿತರಾಗಿದ್ದ ಸಮುದಾಯದವರಿಗೆ ವಿದ್ಯೆಯನ್ನು ಕಲಿಸಿದರು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಬಿ. ಅನ್ನದಾನಪ್ಪ, ವಕೀಲರಾದ ಶಿವಕುಮಾರ್, ಡಿ.ಎಸ್. ಲಕ್ಷ್ಮಣ್, ಮುಖಂಡ ಸಂಪಂಗಿ ರಾಮಯ್ಯ, ಕೃಷ್ಣಪ್ಪ, ಶಿಕ್ಷಕಿ ಸೌಭಾಗ್ಯ, ಗಾಯಕ ನಗೆಮಳೆರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.