ADVERTISEMENT

ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ

ಮೇಕೆದಾಟು ಯೋಜನೆ ಜಾರಿಗೆ ಆಗ್ರಹ: ಕನ್ನಡಪರ, ರೈತ ಸಂಘನೆಗಳಿಂದ ಇಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 11:37 IST
Last Updated 18 ಏಪ್ರಿಲ್ 2015, 11:37 IST

ರಾಮನಗರ :  ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿರುವ ತಮಿಳುನಾಡಿನ ಧೋರಣೆಯನ್ನು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘ, ರಾಜಕೀಯ ಪಕ್ಷಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಶಾಂತಿಯುತವಾಗಿ ಬಂದ್‌ ಆಚರಿಸುವ ಮೂಲಕ, ಕನ್ನಡಿಗರ ಒಗ್ಗಟ್ಟನ್ನು ಪ್ರದರ್ಶಿಸಲು ವಿವಿಧ ಸಂಘಟನೆಗಳು ಮುಂದಾಗಿವೆ.

ನೌಕರರ ಸಂಘದ ಸಹಕಾರ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ರಾಜ್ಯ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳ ರಾಜ್ಯ ಸರ್ಕಾರಿ ನೌಕರರು ಸ್ವಇಚ್ಛೆಯಿಂದ ಕಚೇರಿಗೆ ಗೈರು ಹಾಜರಾಗುವ ಮೂಲಕ ಬಂದ್‌ಗೆ ಸಹಕಾರ ಮತ್ತು ಬೆಂಬಲ ನೀಡಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಕೆ.ಬೈರಲಿಂಗಯ್ಯ ಪ್ರಕಟಣೆಯಲ್ಲಿ ಸರ್ಕಾರಿ ನೌಕರರನ್ನು ಕೋರಿದ್ದಾರೆ.

ವಿವಿಧ ಸಂಘಗಳ ಪಾಲ್ಗೊಳ್ಳುವಿಕೆ:  ಕನ್ನಡ ಸಾಹಿತ್ಯ ಪರಿಷತ್ತು, ಜಯ ಕರ್ನಾಟಕ ಸಂಘಟನೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರೈತ ಸಂಘ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಒಕ್ಕಲಿಗರ ಸಂಘ, ಒಕ್ಕಲಿಗರ ವೇದಿಕೆ, ಕರುನಾಡ ಸೇನೆಯು ಬಂದ್‌ ಅನ್ನು ಬೆಂಬಲಿಸಿವೆ.

ಬೈಕ್‌  ರ್‍ಯಾಲಿ: ಬಂದ್‌ಗೆ ಪೂರಕವಾಗಿ ಶನಿವಾರ ಬೆಳಿಗ್ಗೆ 9 ಗಂಟೆಗೆ ನಗರದ ಐಜೂರು ವೃತ್ತದಿಂದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸದಸ್ಯರು ಬೈಕ್‌ ರ್‍ಯಾಲಿ ಹಮ್ಮಿಕೊಂಡಿವೆ ಎಂದು ತಿಳಿದು ಬಂದಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿರುವ ಈ ಬೈಕ್‌ ರ್ಯಾಲಿಯು ಜಿಲ್ಲಾ ಕಂದಾಯ ಭವನಕ್ಕೆ ಹೋಗಲಿದೆ. ಅಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ಸಂಘಟನೆಗಳು ನಿರ್ಧರಿಸಿವೆ ಎಂದು ಗೊತ್ತಾಗಿದೆ.

ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಾಣವಾದರೆ, ರಾಮನಗರ ಜಿಲ್ಲೆ ಅದರ ಮೊದಲ ಫಲಾನುಭವಿ ಆಗಲಿದೆ. ಹಾಗಾಗಿ ಜಿಲ್ಲೆಯ ಜನರು ಸ್ವಯಂ ಪ್ರೇರಣೆಯಿಂದ ಬಂದ್‌ನಲ್ಲಿ ಭಾಗವಹಿಸಬೇಕು. ವರ್ತಕರು ತಾವಾಗಿಯೇ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಕನ್ನಡಿಗರ ಧ್ವನಿಯಾಗಬೇಕು ಎಂದು ರೈತ ಮುಖಂಡ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಚಿಂತನಾ ಸಭೆ:  ವಿಶ್ವ ಸಂಸ್ಥೆಯು ಶಿಕ್ಷಣದ ಹಕ್ಕು, ಆಹಾರದ ಹಕ್ಕಿನ ಜತೆಗೆ ಶುದ್ಧ ಕುಡಿಯುವ ನೀರಿನ ಹಕ್ಕಿನ ಬಗ್ಗೆಯೂ ಪ್ರತಿಪಾದಿಸಿದೆ. ದೇಶದ ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾದದ್ದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಾಣವಾಗಬೇಕು. ಈ ಕುರಿತು ಶನಿವಾರ ಚನ್ನಪಟ್ಟಣದಲ್ಲಿ ಸಮಾನ ಮನಸ್ಕರು ಜತೆಗೂಡಿ ಚಿಂತನಾ ಸಭೆ ನಡೆಸುತ್ತೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ರೈತ ಮುಖಂಡ ಲಕ್ಷ್ಮಣ ಸ್ವಾಮಿ ಪ್ರತಿಕ್ರಿಯಿಸಿ, ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಮೆರವಣಿಗೆಯಲ್ಲಿ ರೈತ ಸಂಘದ ಮುಖಂಡರು ಸಕ್ರಿಯವಾಗಿ ಭಾಗವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಬಂದ್‌ಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಬೆಂಬಲ ಸೂಚಿಸಿವೆ. 

ಬಂದ್‌ನಲ್ಲಿ ಭಾಗಿ ಇಲ್ಲ: ಕರ್ನಾಟಕ ಬಂದ್‌ ಆಚರಿಸುವುದಕ್ಕೆ ಅಭ್ಯಂತರ ಇಲ್ಲ. ಆದರೆ ಬಂದ್‌ನಲ್ಲಿ ಭಾಗಿ ಆಗುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಜಿಲ್ಲಾ ಘಟಕ ತಿಳಿಸಿದೆ.

‘ನಮ್ಮ ಪಕ್ಷ ಬಂದ್‌ಗೆ ಕರೆ ನೀಡಿಲ್ಲ. ಹಾಗಾಗಿ ನಾವು ಬಂದ್‌ನಲ್ಲಿ ಭಾಗವಹಿಸುವುದಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜು ತಿಳಿಸಿದ್ದಾರೆ. ‘ಮೇಕೆದಾಟಿನಲ್ಲಿ ಜಲಾಶಯ ನಿರ್ಮಿಸುವುದಕ್ಕೆ ರಾಜ್ಯ ಸರ್ಕಾರ ಬದ್ಧತೆ ತೋರಿದೆ. ಬಜೆಟ್‌ನಲ್ಲಿ ಡಿಪಿಆರ್‌ ಸಿದ್ಧಪಡಿಸಲು ಘೋಷಿಸಿದೆ. ಹೀಗಿರುವಾಗ ಬಂದ್‌ ಅನಗತ್ಯವಾಗಿತ್ತು. ಅದಾಗ್ಯೂ ನಮಗೆ ರಾಜ್ಯ ಘಟಕದದಿಂದ ಯಾವುದೇ ಸೂಚನೆ ಬಂದಿಲ್ಲದ ಕಾರಣ, ಬಂದ್‌ನಲ್ಲಿ ಭಾಗವಹಿಸುವುದಿಲ್ಲ’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್‌ ಹೇಳಿದ್ದಾರೆ.

ಕನಕಪುರ ವರದಿ:  ಮೇಕದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಸರ್ಕಾರದ ಧೋರಣೆಯನ್ನು ಖಂಡಿಸಿ ಏಪ್ರಿಲ್‌ 18ರಂದು ನಡೆಯುತ್ತಿರುವ ಕರ್ನಾಟಕ ಬಂದಗ್‌ ಬೆಂಬಲವಾಗಿ ಕನಕಪುರದಲ್ಲಿಯೂ ಬಂದ್‌ ನಡೆಸುತ್ತಿರುವುದಾಗಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಂಪತ್‌ಕುಮಾರ್‌ ಮತ್ತು ಜಯಕರ್ನಾಟಕ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದ್ದಾರೆ.

ಸಮುದ್ರಕ್ಕೆ ವ್ಯರ್ಥವಾಗಿ ಹೋಗುತ್ತಿರುವ ಕಾವೇರಿ ನೀರನ್ನು ಬಳಕೆ ಮಾಡಿಕೊಳ್ಳಲು ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಅದನ್ನು ಹತ್ತಿಕ್ಕಲು ತಮಿಳುನಾಡು ರಾಜ್ಯ ಷಡ್ಯಂತರ ನಡೆಸುತ್ತಿದೆ ಎಂದು ದೂರಿದರು.

ಯೋಜನೆಯನ್ನುಬೆಂಬಲಿಸಿ ರಾಜ್ಯಾದ್ಯಂತ ಬಂದ್‌ ಆಚರಿಸಿ ಸರ್ಕಾರಕ್ಕೆ ನೈತಿಕ ಬೆಂಬಲ ನೀಡಬೇಕಿದೆ. ಉತ್ತರ ಕರ್ನಾಟಕ ಭಾಗದ ಜನತೆಗಿಂತ ಹಳೇಮೈಸೂರು ಭಾಗ ಸೇರಿದಂತೆ ಬೆಂಗಳೂರಿನ ಜನತೆ ಕಾವೇರಿ ನೀರನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದು ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ ಎಂದರು. ಶನಿವಾರ ನಡೆಯುವ ಕರ್ನಾಟಕ ಬಂದ್‌ಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮಾಗಡಿ ವರದಿ: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸಿ, ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಜಲಾಶಯವ ನಿರ್ಮಾಣ ಯೋಜನೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ(ಏ,18)ರಂದು ಕರೆ ನೀಡಿರುವ ಬಂದ್‌ಗೆ  ಸಾರ್ವಜನಿಕರು, ಅಧಿಕಾರಿಗಳು, ವಕೀಲರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರ ಸಂಪೂರ್ಣ ಬೆಂಬಲ ನೀಡುವಂತೆ ಸಹೃದಯ ಬಳಗದ ಉಪಾಧ್ಯಕ್ಷ ಎಂ.ಕೆ.ಶಿವಲಿಂಗಯ್ಯ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಬೆಂಬಲ:  ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯದ ಕೃಷ್ಣಮೂರ್ತಿ ಬೆಂಬಲ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜೆ.ಕುಮಾರ್‌ ಮಾತನಾಡಿ, ಶನಿವಾರ ಬೆಳಿಗ್ಗೆ 10 ಗಂಟೆಗೆ ಕಲ್ಯಾಬಾಗಿಲು ಬಳಿ ಬಂದ್‌ಗೆ ಬೆಂಬಲಿಸಿ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ.ಶ್ರೀನಿವಾಸ್‌, ಶ್ರೀಗಿರಿಪುರ ಕಾಡುಗೊಲ್ಲರ ಹಟ್ಟಿಯ ಸ್ನೇಹ ಜೀವಿ ಶ್ರೀಕೃಷ್ಣ ಯುವಕರ ಸಂಘದ ಅಧ್ಯಕ್ಷ ಬೈಲಯ್ಯ, ರಾಜ್ಯ ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಹನುಮಂತೇಗೌಡ, ಹೊಂಬಾಳಮ್ಮನ ಪೇಟೆ ಗಂಗಹನುಮಯ್ಯ ಇತರರು ರಾಜ್ಯ ಬಂದ್‌ ಗೆ ಬೆಂಬಲಿಸಿದ್ದು, ಮಾಗಡಿ ತಾಲ್ಲೂಕು ಬಂದ್‌ ಆಚರಿಸುವಂತೆ ಮನವಿ ಮಾಡಿದ್ದಾರೆ.

ಕಾನೂನು ಕ್ರಮ: ಬಂದ್‌ಗೆ ಕರೆ ನೀಡಿರುವ ವಿವಿಧ ಕನ್ನಡ ಪರ ಸಂಘಟನೆಗಳ ಜಿಲ್ಲಾ ಘಟಕದ ಪದಾಧಿಕಾರಿಗಳ ಜತೆ ಈಗಾಗಲೇ ಸಭೆ ನಡೆಸಿ, ಕಾನೂನು ಕೈಗೆ ತೆಗೆದುಕೊಳ್ಳದಂತೆ ಎಚ್ಚರಿಸಲಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆಯೂ ಅವರಿಗೆ ತಿಳಿ ಹೇಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ವೇಳೆ ಬಂದ್‌ನಿಂದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾದರೆ ಅದಕ್ಕೆ ಬಂದ್‌ ಕರೆಕೊಟ್ಟ ಸಂಘಟನೆಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂಬುದನ್ನು ಸಂಘಟನೆಗಳಿಗೆ ಮನದಟ್ಟು ಮಾಡಲಾಗಿದೆ’  ಎಂದು  ಎಚ್ಚರಿಕೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌  ಮಾಡಲಾಗಿದೆ. ರಾಜ್ಯ ಮೀಸಲು ಹಾಗೂ ಜಿಲ್ಲಾ ಮೀಸಲು ಪಡೆಯ 10 ಹೆಚ್ಚುವರಿ ತುಕಡಿಯನ್ನು ಕರೆಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದೊಡ್ಡಬಳ್ಳಾಪುರ ವರದಿ :  ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ ಹಾಗೂ ತಮಿಳುನಾಡು ಸರ್ಕಾರದ ಅನಗತ್ಯ ಖ್ಯಾತೆ ಖಂಡಿಸಿ ಏ.18 ರಂದು ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ತಾಲ್ಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ದೊಡ್ಡಬಳ್ಳಾಪುರ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಶನಿವಾರ ಬೆಳಿಗ್ಗೆ 6 ರಿಂದಲೇ ಕೈಗಾರಿಕಾ ಪ್ರದೇಶ ಸೇರಿದಂತೆ ಇಡೀ ನಗರದಲ್ಲಿ ಬಂದ್ ಆಚರಿಸಲಾಗುವುದು. ಬೆಳಗ್ಗೆ 10.30ಕ್ಕೆ ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿಯಿಂದ ತಾಲ್ಲೂಕು ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.