ADVERTISEMENT

ಕಲಾಧಾಮಕ್ಕೆ ರಸ್ತೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 9:16 IST
Last Updated 6 ನವೆಂಬರ್ 2017, 9:16 IST

ರಾಮನಗರ: ಅಸಹಾಯಕ ಅನಾಥ ಕಲಾವಿದರಿಗಾಗಿ ನಿರ್ಮಿಸಿರುವ ಆಶ್ರಯ ಕಲಾಧಾಮಕ್ಕೆ ಸಂಚರಿಸಲು ರಸ್ತೆ ನೀಡಬೇಕು ಎಂದು ಒತ್ತಾಯಿಸಿ ಕುಂಬಳಗೂಡಿನ ವಿವೇಕಾನಂದ ಕಾಲೇಜು ವೃತ್ತದಲ್ಲಿ ಜೂನಿಯರ್ ರಾಜಕುಮಾರ್ (ಮುನಿಕುಮಾರ್) ಭಾನುವಾರ ಬಭ್ರುವಾಹನ ವೇಷಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

‘20 ವರ್ಷಗಳಿಂದ ರಾಜ್‍ಕುಮಾರ್ ಅವರ ಪಾತ್ರಗಳಿಗೆ ಬಣ್ಣ ಹಚ್ಚಿ ನಾಟಕ ಮಾಡಿ ಅನಾಥ ಕಲಾವಿದರಿಗಾಗಿ ಆಶ್ರಯ ಕಲಾಧಾಮ ನಿರ್ಮಿಸುತ್ತಿದ್ದೇನೆ. ಜಮೀನು ಮಾರಾಟ ಮಾಡಿರುವವರು ಓಡಾಡಲು ರಸ್ತೆ ನೀಡದೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಜೂನಿಯರ್‌ ರಾಜಕುಮಾರ್ ಆರೋಪಿಸಿದರು.

‘ಕೆಂಗೇರಿ ಹೋಬಳಿಯ ಕೆ.ಗೊಲ್ಲಹಳ್ಳಿ ಗ್ರಾಮದ ಸರ್ವೇ ನಂ 100ರಲ್ಲಿ 2 ಎಕರೆ ಜಮೀನನ್ನು ಗ್ರಾಮದ ಕೃಷ್ಣಪ್ಪ ಅವರಿಂದ ಖರೀದಿ ಮಾಡಿದ್ದೇನೆ. ಈ ಜಮೀನಿಗೆ ಓಡಾಡಲು 15 ಅಡಿ ಜಾಗ ಬಿಟ್ಟಿರುವುದಾಗಿ ಹೇಳಿದ್ದರು. ಆದರೆ ಈ ರಸ್ತೆಯಲ್ಲಿ ಓಡಾಡಲು ಹೋದರೆ ಹಲ್ಲೆ ಮಾಡುತ್ತಾರೆ’ ಎಂದು ಅಳಲನ್ನು ತೋಡಿಕೊಂಡರು.

ADVERTISEMENT

ಈ ಸಂಬಂಧ ಗ್ರಾಮಸ್ಥರು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೋಲಿಸರಿಗೆ ದೂರು ನೀಡಲು ಹೋದರೆ ರಕ್ತ ಸುರಿಸಿಕೊಂಡು ಬನ್ನಿ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸೂಕ್ತ ರಸ್ತೆ ಇಲ್ಲದೆ ಹಳ್ಳದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್‌ ಅವರಲ್ಲಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ ಎಂದು ದೂರಿದರು. ಕಲಾವಿದರಾದ ಜೂನಿಯರ್ ಪುನಿತ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್‍ ನಾಗ್, ಸಿಂಚನ, ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.