ADVERTISEMENT

ಕಲಾವಿದರಿಗೆ ಅವಕಾಶಗಳ ಕೊರತೆ: ಬೇಸರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 6:15 IST
Last Updated 18 ಜನವರಿ 2017, 6:15 IST
ಕಲಾವಿದರಿಗೆ ಅವಕಾಶಗಳ ಕೊರತೆ: ಬೇಸರ
ಕಲಾವಿದರಿಗೆ ಅವಕಾಶಗಳ ಕೊರತೆ: ಬೇಸರ   

ರಾಮನಗರ: ‘ನುರಿತ ಕಲಾವಿದರಿಗೆ ಇಂದು ಸೂಕ್ತ ಅವಕಾಶಗಳು ಸಿಗುತ್ತಿಲ್ಲ’ ಎಂದು ಮೈಸೂರಿನ ಕಂಸಾಳೆ ಕಲಾವಿದ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಪದ ಕಲೆ  ಕಲಿಯುತ್ತೇವೆ ಎಂದು ಬರುತ್ತಾರೆ. ಸ್ವಲ್ಪ ಕಲಿತ ಕೂಡಲೇ ತಾವೇ ಒಂದು ತಂಡವನ್ನು ಕಟ್ಟಿಕೊಂಡು ಕಾರ್ಯಕ್ರಮ ನೀಡಲು ಪ್ರಾರಂಭಿಸುತ್ತಾರೆ. ಇದರಿಂದ ಜನಪದ ಪ್ರದರ್ಶನಾತ್ಮಕ ಕಲೆಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿವೆ’ ಎಂದು ತಿಳಿಸಿದರು.

‘ನಮ್ಮ ತಾತನ ಕಾಲದಿಂದ ನಮ್ಮ ಕುಟುಂಬ ಕಂಸಾಳೆ ಪ್ರದರ್ಶನವನ್ನು ನೀಡುತ್ತಿದೆ. ನನ್ನ ಮಕ್ಕಳು, ಮೊಮ್ಮಕ್ಕಳು ಸಹ ಪ್ರದರ್ಶನವನ್ನು ನೀಡುತ್ತಿದ್ದಾರೆ. ನಾನು ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದೇನೆ. 9ನೇ ವರ್ಷಕ್ಕೆ ತಂದೆಯಿಂದ ಕಂಸಾಳೆ ಪ್ರದರ್ಶನ ನೀಡುವುದನ್ನು ಕಲಿತೆ’ ಎಂದು ತಿಳಿಸಿದರು.

‘ಈಗ ಹಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಕಂಸಾಳೆ ಪ್ರದರ್ಶನ ನೀಡುವ ಏಕೈಕ ತಂಡ ನಮ್ಮದಾಗಿತ್ತು. ಆದರೆ ಈಗ ರಾಜ್ಯದಲ್ಲಿ ಕಂಸಾಳೆ ಪ್ರದರ್ಶನ ನೀಡುವ ಸಾವಿರಕ್ಕೂ ಹೆಚ್ಚು ತಂಡಗಳಿವೆ. ಆದರೆ ಹಲವು ತಂಡಗಳಲ್ಲಿ ನುರಿತ ಕಲಾವಿದರು ಈಗಲೂ ಇಲ್ಲ. 20 ವರ್ಷಗಳ ಹಿಂದೆ ಒಂದು ಪ್ರದರ್ಶನಕ್ಕೆ ₹1ಸಾವಿರ ನೀಡಲಾಗುತ್ತಿತ್ತು. ಆದರೆ ಈಗ ₹10 ಸಾವಿರ ನೀಡುತ್ತಿದ್ದರೂ ಖರ್ಚು ಕೂಡ ಅಷ್ಟೇ ಇರುತ್ತದೆ’ ಎಂದರು.

‘ನನಗೆ ಈಗ 66 ವರ್ಷ ವಯಸ್ಸು, ದೆಹಲಿ, ಮದ್ರಾಸ್‌, ಕೇರಳ, ಕೊಲ್ಕತ್ತ ಮಾತ್ರವಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ, ರಾಷ್ಟ್ರೀಯ ಮಟ್ಟದ  ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಇಲ್ಲಿಯವರೆಗೂ ಸಾವಿರಾರು ಮಕ್ಕಳಿಗೆ ಕಂಸಾಳೆ ಪ್ರದರ್ಶನವನ್ನು ಹೇಳಿ ಕೊಟ್ಟಿದ್ದೇನೆ. ಈಗಲೂ ಹೇಳಿ ಕೊಡುತ್ತಿದ್ದೇನೆ. ಆದರೆ, ಕಂಸಾಳೆ ಪ್ರದರ್ಶನ ನೀಡುವುದರಿಂದಲೇ ಜೀವನ ನಡೆಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಹಿಂದಿನ ದಿನಗಳಲ್ಲಿ ಜನರು ಜನಪದ ಕಲೆಗಳ ಪ್ರದರ್ಶನವನ್ನು  ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಟಿ.ವಿ., ಮೊಬೈಲ್‌ಗಳು ಬಂದ ಮೇಲೆ ಜನಪದ ಕಲೆಗಳ ಪ್ರದರ್ಶನಗಳು ಜನರಿಂದ ತಿರಸ್ಕಾರಕ್ಕೆ ಒಳಗಾಗುತ್ತಿವೆ. ಜನಪದ ಕಲೆಗಳು ಎಂದರೆ ಮೆರವಣಿಗೆ, ಉತ್ಸವಗಳಿಗೆ ಸೀಮಿತ ಎಂಬಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ವ್ಯವಸ್ಥಾಪಕ ನಿರ್ದೇಶಕಿ ಇಂದಿರಾ ಬಾಲಕೃಷ್ಣ, ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್‌, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.