ADVERTISEMENT

ಕಸದ ತೊಟ್ಟಿಗಳಾದ ಖಾಲಿ ನಿವೇಶನಗಳು

ಎಲ್ಲೆಂದರೆ ಅಲ್ಲಿ ತ್ಯಾಜ್ಯ ಎಸೆದುಹೋಗುವವರೇ ಹೆಚ್ಚು: ಜನರಲ್ಲೂ ಮೂಡಬೇಕಿದೆ ಜಾಗೃತಿ

ಆರ್.ಜಿತೇಂದ್ರ
Published 25 ಅಕ್ಟೋಬರ್ 2016, 11:32 IST
Last Updated 25 ಅಕ್ಟೋಬರ್ 2016, 11:32 IST
ರಾಮನಗರದ ಐಜೂರು ಬಡಾವಣೆಯ ನಿವೇಶನವೊಂದರಲ್ಲಿ ಕಸ ಸುರಿದು ಬೆಂಕಿ ಹಚ್ಚಿರುವುದು
ರಾಮನಗರದ ಐಜೂರು ಬಡಾವಣೆಯ ನಿವೇಶನವೊಂದರಲ್ಲಿ ಕಸ ಸುರಿದು ಬೆಂಕಿ ಹಚ್ಚಿರುವುದು   

ರಾಮನಗರ: ನಿವೇಶನಗಳು ಇರುವುದು ಮನೆ ಕಟ್ಟಿಕೊಳ್ಳುವುದಕ್ಕೆ. ಆದರೆ ನಗರದ ಬಹುತೇಕ ಕಡೆ ಖಾಲಿ ಸೈಟುಗಳು ಕಸದ ತೊಟ್ಟಿಯಾಗಿ ಪರಿಣಮಿಸಿವೆ.

ಒಂದು ಅಂದಾಜಿನ ಪ್ರಕಾರ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ  26 ಸಾವಿರ ನೋಂದಾಯಿತ ಆಸ್ತಿಗಳಿವೆ. ಇದರಲ್ಲಿ 11 ಸಾವಿರ ನಿವೇಶನಗಳಲ್ಲಿ ಮನೆಗಳು ನಿರ್ಮಾಣವಾಗಿದ್ದು, ಇನ್ನೂ 15 ಸಾವಿರ ನಿವೇಶನಗಳು ಖಾಲಿಯಾಗಿಯೇ ಉಳಿದಿವೆ. ಹೀಗೆ ಖಾಲಿ ಬಿದ್ದ ಸೈಟುಗಳು ಕ್ರಮೇಣ ಕಸದ ರಾಶಿಯ ತಾಣವಾಗುತ್ತಿವೆ.

ಜನನಿಬಿಡ ಪ್ರದೇಶಗಳಲ್ಲಿ ಖಾಲಿ ಇರುವಂತಹ ಸೈಟುಗಳಲ್ಲಿ ಇಂತಹ ಚಟುವಟಿಕೆಗಳು ಹೆಚ್ಚು. ನಗರಸಭೆಯಿಂದ ಬರುವ ಕಸಸಂಗ್ರಹಣೆ ಸಿಬ್ಬಂದಿಗೆ ಕಸ ನೀಡುವ ಬದಲು ತ್ಯಾಜ್ಯವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತಂದು ಯಾರೂ ನೋಡದಂತೆ ಎಸೆದು ಮಾಯವಾಗುವವರೇ ಹೆಚ್ಚು. ಇನ್ನೂ ಕೆಲವರು ಇಂತಹ ಸೈಟುಗಳಲ್ಲಿ ಕಸ ಹಾಕುವುದೂ ತಮ್ಮ ಹಕ್ಕು ಎಂಬಂತೆ ವರ್ತಿಸುವುದು ಉಂಟು.

ಜಗಳಕ್ಕೆ ನಾಂದಿ: ಒಂದು ಸೈಟಿನಲ್ಲಿ ಒಮ್ಮೆ ಕಸ ಬಿದ್ದರೆ ಸಾಕು. ಕಾಲಕ್ರಮೇಣ ಎಲ್ಲರೂ ಅಲ್ಲಿಯೇ ಕಸ ಚೆಲ್ಲುವುದು ರೂಢಿಯಾಗುತ್ತದೆ. ಹೀಗೆ ಚೆಲ್ಲಿದ ತ್ಯಾಜ್ಯ ಕೊಳೆತು ನಾರುತ್ತ ಅಲ್ಲೊಂದು ಅನೈರ್ಮಲ್ಯದ ತಾಣವೇ ಸೃಷ್ಟಿಯಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೂ ಕಿರಿಕಿರಿ. ಕೆಲವೊಮ್ಮೆ ಇದು ಜಗಳಕ್ಕೂ ನಾಂದಿ ಹಾಡಿದ ಉದಾಹರಣೆ ಉಂಟು.

‘ನಗರದ ವ್ಯಾಪ್ತಿಯಲ್ಲಿ ಈಚೆಗೆ ಚಿಕುನ್‌ಗುನ್ಯಾ, ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜ್ವರದಿಂದ ಬಳಲುವವರ ಸಂಖ್ಯೆಯೂ ವಿಪರೀತವಾಗಿದೆ. ಪರಿಸರದಲ್ಲಿನ ಶುಚಿತ್ವದ ಕೊರತೆಯಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಎಲ್ಲೆಂದರೆ ಅಲ್ಲಿ ಕಸ ಸಂಗ್ರಹವಾಗುತ್ತಿರುವುದೂ ಇದಕ್ಕೆ ಪ್ರಮುಖ ಕಾರಣ’ ಎನ್ನುತ್ತಾರೆ ಐಜೂರಿನ ಮಲ್ಲೇಶ್ವರ ಬಡಾವಣೆ ನಿವಾಸಿ ರಮೇಶ್‌.

‘ಸೈಟುಗಳಲ್ಲಿ ಸುರಿದ ಕಸ ರಾಶಿಯಾದಾಗ ಕೆಲವರು ಅದಕ್ಕೆ ಬೆಂಕಿ ಹಚ್ಚುತ್ತಾರೆ. ಪ್ಲಾಸ್ಟಿಕ್ ತ್ಯಾಜ್ಯಗಳು ಹೊತ್ತಿ ಉರಿಯುವ ಕಾರಣ ಸುತ್ತಲೆಲ್ಲ ದಟ್ಟ ಹೊಗೆ ಆವರಿಸಿ ಮಕ್ಕಳಿಗೆ ಉಸಿರಾಡುವುದೂ ಕಷ್ಟವಾಗುತ್ತದೆ’ ಎಂದು ವಿವರಿಸುತ್ತಾರೆ.

ಜಾನುವಾರು ಹೊಟ್ಟೆಗೆ ಪ್ಲಾಸ್ಟಿಕ್‌ ತ್ಯಾಜ್ಯ: ನಿವೇಶನಗಳು, ರಸ್ತೆ ಬದಿಯ ಖಾಲಿ ಜಾಗಗಳಲ್ಲಿ ಸಂಗ್ರಹವಾಗುತ್ತಿರುವ ಕಸದಲ್ಲಿ ಬಹುಪಾಲು ಪ್ಲಾಸ್ಟಿಕ್‌ ತ್ಯಾಜ್ಯಗಳೇ ತುಂಬಿವೆ. ಇಂತಹ ಜಾಗಗಳಿಗೆ ಆಹಾರ ಹರಸಿ ಹಸುಗಳು, ಮೇಕೆಗಳು ಬರುವುದು ಸಾಮಾನ್ಯವಾಗಿದೆ. ಇವುಗಳು ರುಚಿ ಹುಡುಕಿ ಕಸದ ಜೊತೆಗೆ ಪ್ಲಾಸ್ಟಿಕ್‌ ಅನ್ನು ತಿನ್ನುತ್ತಿವೆ, ಕರಗುವ ಗುಣವೇ ಇಲ್ಲದ ಪ್ಲಾಸ್ಟಿಕ್ ಜಾನುವಾರುಗಳ ಹೊಟ್ಟೆ ಸೇರಿ ವಿಷವಾಗಿ ಪರಿಣಮಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.