ADVERTISEMENT

ಕಾಡು ಪ್ರಾಣಿಗಳ ಹಾವಳಿಗೆ ಬೆಳೆ ನಾಶ

ತತ್ತರಿಸಿದ ರೈತರ ಬದುಕು: ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ

ಬರಡನಹಳ್ಳಿ ಕೃಷ್ಣಮೂರ್ತಿ
Published 28 ನವೆಂಬರ್ 2014, 10:51 IST
Last Updated 28 ನವೆಂಬರ್ 2014, 10:51 IST
ಕಾಡು ಪ್ರಾಣಿಗಳ ಹಾವಳಿಗೆ ಬೆಳೆ ನಾಶ
ಕಾಡು ಪ್ರಾಣಿಗಳ ಹಾವಳಿಗೆ ಬೆಳೆ ನಾಶ   

ಕನಕಪುರ:  ಸಕಾಲಕ್ಕೆ ಮಳೆ ಇಲ್ಲದೆ, ಕೂಲಿ ಕಾರ್ಮಿಕರ ಸಮಸ್ಯೆಯನ್ನು ಸಹಿಸಿಕೊಂಡು ಕಷ್ಟಪಟ್ಟು ಬೆಳೆದ ಬೆಳೆ ಕೈಸೇರುವ ಸಮಯದಲ್ಲಿ ಕಾಡು ಪ್ರಾಣಿಗಳು ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿರುವುದರಿಂದ ರೈತರ ಬದುಕು ಅತಂತ್ರವಾಗುತ್ತಿದೆ.
ಅರಣ್ಯದ ಅಂಚಿನ ಗ್ರಾಮಗಳ ರೈತರ ಬದುಕು ಅಸಹನೀಯವಾಗಿದ್ದರೂ ಪರಿ­ಹಾರ ಮಾತ್ರ ದೊರೆತಿಲ್ಲ.

ತಾಲ್ಲೂಕಿನ ಸಾತನೂರು ಹೋಬಳಿ ಬೂಹಳ್ಳಿ ಗ್ರಾಮ ಇಂತಹ ಸಮಸ್ಯೆ­ಯನ್ನು ಎದುರಿಸುತ್ತಿರುವ ಗ್ರಾಮ­ವಾಗಿದೆ.
ಈ ಗ್ರಾಮ ಕಾಡಂಚಿನಲ್ಲಿರುವು­­ದರಿಂದ ಬಹುತೇಕ ಜಮೀನುಗಳು ಕಾಡಿನ ಸರಹದ್ದಿನಲ್ಲೇ ಬರುತ್ತವೆ. ಎಷ್ಟೇ ಕಾವಲು ಕಾದರೂ ಕಾಡು ಪ್ರಾಣಿ­ಗಳಿಂದ ಬೆಳೆ ರಕ್ಷಿಸಿ  ಮನೆಗೆ ತರುವುದು ದುಸ್ತರವಾಗಿದೆ ಎಂದು ರೈತರು ದೂರುತ್ತಾರೆ.

ಬಿತ್ತನೆ ಸಮಯದಲ್ಲಿ ಕಾಡು ಹಂದಿ, ಕೋತಿಗಳು ಬಿತ್ತನೆ ಬೀಜವನ್ನೇ ತಿಂದು ನಾಶ ಮಾಡುತ್ತವೆ. ಅವುಗಳಿಂದ ತಪ್ಪಿಸಿ­ಕೊಂಡು ಬೆಳೆಯುವ ಬೆಳೆಗಳನ್ನು ಆನೆ­ಗಳು ದಾಳಿ ಮಾಡಿ ತಿಂದು, ತುಳಿದು ನಾಶ ಮಾಡುತ್ತವೆ. ಬೆಳೆ ಇನ್ನೇನು ಕೈಗೆ ಸಿಗುತ್ತದೆ ಎನ್ನುವಷ್ಟರಲ್ಲಿ ಕಾಡು ಹಂದಿಗಳು ದಾಳಿ ಮಾಡಿ ರಾಗಿ ತೆನೆ­ಗಳನ್ನು ಕೊಯ್ಲು ಮಾಡಿದ ರೀತಿಯಲ್ಲಿ ತಿಂದು  ಮೊಂಡು ರಾಗಿ ಕಡ್ಡಿಯನ್ನು ಬಿಡುತ್ತವೆ ಎಂದು ರೈತರು ಸಮಸ್ಯೆ­ಯನ್ನು ಬಿಚ್ಚಿಡುತ್ತಾರೆ.

ಗ್ರಾಮದ ಚಿಕ್ಕರಾಮೇಗೌಡ, ಶಿವ­ಸ್ವಾಮಿ, ರಾಮಕೃಷ್ಣೇಗೌಡ, ಮರಪ್ಪ, ಮೊಳ್ಳೇಗೌಡ, ವೆಂಕಟೇಗೌಡ, ಭಂಟಯ್ಯ, ಮುತ್ತಯ್ಯ, ಸುಬ್ಬಯ್ಯ, ವೀರಭದ್ರಯ್ಯ ಮೊದಲಾದವರ ರಾಗಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

ರಾಗಿಗಿಂತ ಹೆಚ್ಚಿನ ಲಾಭ ನೀಡುವ ನೆಲಗಡಲೆ ಬೆಳೆಯು ಕಾಡು ಹಂದಿಗಳ ಪಾಲಾಗುತ್ತಿದೆ. ಇದರಿಂದ ರೈತರು ನೆಲಗಡಲೆ ಬೆಳೆಯುವುದನ್ನು ಬಿಟ್ಟು ರಾಗಿ ಬೆಳೆದರೆ, ಅದು ಸಹ ಕಾಡು ಪ್ರಾಣಿಗಳ ಪಾಲಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಶಿವಸ್ವಾಮಿ.
ಅರಣ್ಯ ಅಧಿಕಾರಿಗಳ ನಿರ್ಲಕ್ಷದಿಂದ ಕಾಡುಪ್ರಾಣಿಗಳು ಬೆಳೆ ನಾಶ ಮಾಡು­ತ್ತಿವೆ. ಸರಿಯಾದ ಬೆಳೆ ರೈತರ ಕೈ ಸೇರಿ­ದರೆ ಒಬ್ಬೊಬ್ಬರಿಗೆ ₨ 50ರಿಂದ 60 ಸಾವಿರ ಹಣ ಸಿಗುತ್ತಿತ್ತು. ವರ್ಷ­ಕ್ಕಾಗು­ವಷ್ಟು ರಾಗಿ ಫಸಲು ದೊರೆಯುತ್ತಿತ್ತು.  ಆದರೆ, ಅರಣ್ಯ ಅಧಿಕಾರಿಗಳು ಹಂದಿ ಮೇದಿರುವುದಕ್ಕೆ ಪರಿಹಾರವಿಲ್ಲ ಎನ್ನುತ್ತಾರೆ. ಇದರಿಂದ ನಷ್ಟಕೊಳಗಾದ ರೈತರು ಪರಿಹಾರವಿಲ್ಲದೆ ಪರದಾಡು­ವಂತಾಗಿದೆ ಎನ್ನುತ್ತಾರೆ ಚಿಕ್ಕರಾಮೇ­ಗೌಡ .

ಕಷ್ಟಪಟ್ಟು ಬೇಸಾಯ ಮಾಡಿದರೂ ಇಂದು ಫಸಲು ದೊರೆಯದಂತಹ ಪರಿ­ಸ್ಥಿತಿ ನಿರ್ಮಾಣವಾಗಿರುವುದರಿಂದ ಬೂಹಳ್ಳಿ ಗ್ರಾಮ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ರೈತರು ಬೇಸಾಯ ಮಾಡದೆ ನೂರಾರು ಎಕರೆಯಷ್ಟು ಭೂಮಿ­ಯನ್ನು ಪಾಳು ಬಿಟ್ಟಿದ್ದಾರೆ. ತಮಗಿ­ರುವ ಭೂಮಿಯಲ್ಲಿ  ವ್ಯವ­ಸಾಯ ಮಾಡಲಾಗದಂತ ಪರಿಸ್ಥಿತಿ ಉಂಟಾಗಿ ರೈತರು ಗುಳೇ ಹೋಗುತ್ತಿ­ದ್ದಾರೆ. ಈ ಭಾಗದ ರೈತರ ಬದುಕು ಅತಂತ್ರ ಸ್ಥಿತಿಯಲ್ಲಿದೆ ಎನ್ನುತ್ತಾರೆ ಬೂಹಳ್ಳಿ ಗ್ರಾಮದ ಮುಖಂಡ ಬಿ.ಎಲ್‌.ಉಮೇಶ್‌
ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿ­ರುವ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಕೈಗೆ ಬಂದ ಬೆಳೆಯು ನಾಶವಾಗು­ತ್ತಿರುವುದರಿಂದ ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳನ್ನು ತಡೆಗಟ್ಟಬೇಕು, ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ದೊರಕಿಸಬೇಕೆಂದು ನಷ್ಟಕ್ಕೆ ಒಳಗಾಗಿರುವ ರೈತರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.