ADVERTISEMENT

ಕಾಮಗಾರಿ ಸ್ಥಗಿತಕ್ಕೆ ನಗರಸಭೆ ಸೂಚನೆ

ಕೆಂಗಲ್‌ ಹನುಮಂತಯ್ಯ ಪ್ರತಿಮೆ ನಿರ್ಮಾಣಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 11:18 IST
Last Updated 2 ಸೆಪ್ಟೆಂಬರ್ 2014, 11:18 IST

ರಾಮನಗರ:  ವಿಧಾನಸೌಧದ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ತೊಡಕು ಎದುರಾಗಿದ್ದು, ನಗರಸ­ಭೆಯು ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಿದೆ.

ಪ್ರತಿಮೆ ಸ್ಥಾಪನೆಗೆ 2011ರಲ್ಲಿ ನಗರಸಭೆಯ ಸಭೆಯಲ್ಲಿ ನಿರ್ಣಯ­ವಾಗಿತ್ತು. ಈ ಸಂಬಂಧ ಪ್ರತಿಮೆ ಸ್ಥಾಪನಾ ಸಮಿತಿಗೆ ನಗರಸಭೆ ಅನುಮತಿ ಪತ್ರವನ್ನೂ ನೀಡಿತ್ತು. ಈ ಕಾರಣದಿಂದ ಸಮಿತಿಯ ಪದಾಧಿಕಾರಿಗಳು ನಗರದ ಹಳೆ ಬಸ್ ನಿಲ್ದಾಣದ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ಕಾಮಗಾರಿ ಆರಂಭಿಸಿದರು.

ಆದರೆ ನಗರಸಭಾ ಆಯುಕ್ತರ ಸೂಚನೆ ಮೇರೆಗೆ ಡಿವೈಎಸ್ಪಿ ಲಕ್ಷ್ಮಿ ಗಣೇಶ್ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಸುಬ್ರಹ್ಮಣ್ಯ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯೊಂದಿಗೆ ಆಗಮಿಸಿ ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಿದರು.

ಈ ವೇಳೆ ಸಮಿತಿಯ ಪದಾಧಿಕಾ­ರಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನೂರಾರು ಸಾರ್ವಜನಿಕರು ಜಮಾ­ಯಿಸಿ­ದರು. ವಿಧಾನಸಭೆಯಲ್ಲಿ ರಾಮ­ನಗ­ರ­ವನ್ನು ಪ್ರತಿನಿಧಿಸಿ ಮುಖ್ಯಮಂತ್ರಿಗಳಾಗಿದ್ದ ಹನುಮಂತಯ್ಯ ಅವರ ಪ್ರತಿಮೆ ಸ್ಥಾಪನೆಗೆ ಅವರ ಕ್ಷೇತ್ರದಲ್ಲೇ ತಡೆವೊಡ್ಡುವುದು ಸರಿಯಲ್ಲ ಎಂದು ನಾಗರಿಕರು ಸಹ ವಾದಿಸಿದರು.

ಜಿಲ್ಲಾಡಳಿತ ಮತ್ತು ನಗರಸಭೆಯ ವಿರೋಧದ ನಡುವೆಯೂ ಪ್ರತಿಮೆ ಸ್ಥಾಪನೆಗೆ ಸಮಿತಿಯ ಪದಾಧಿಕಾರಿಗಳು ಮುಂದಾದರು. ಪಕ್ಷಾತೀತವಾಗಿ ಮುಖಂ­ಡರು ತಾವೇ ಕಾಮಗಾರಿ ಕೈಗೊಳ್ಳಲು ಮುಂದಾದರು. ಈ ವೇಳೆ ಪೊಲೀಸರು ಸಮಿತಿಯ ಪದಾಧಿಕಾರಿ­ಗಳಿಗೆ ಮುಂದಿನ ಕಾಮಗಾರಿಯನ್ನು ಕೈಗೊಳ್ಳದಂತೆ ತಾಕೀತು ಮಾಡಿದರು. ಅಲ್ಲದೆ ಸರ್ಕಾರದ ಆದೇಶಕ್ಕೆ ಕಾಯುವಂತೆಯೂ ಸಲಹೆ ನೀಡಿದರು.

2012ರಲ್ಲಿ ಸುಪ್ರೀಂಕೋರ್ಟ್‌ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳನ್ನು ಸ್ಥಾಪಿಸಬಾರದು ಎಂದು ನಿರ್ದೇಶನ ನೀಡಿದೆ. ಹೀಗಾಗಿ ಕಾಮಗಾರಿಗೆ ಅವಕಾಶ ನೀಡುವುದಿಲ್ಲ, ಜಿಲ್ಲಾಡಳಿತ­ದಿಂದಲೂ ತಮಗೆ ಸೂಚನೆ ದೊರೆತಿ­ರುವುದಾಗಿ ನಗರಸಭೆಯ ಹಿರಿಯ ಅಧಿಕಾರಿಗಳು ಸಮಿತಿಯ ಪದಾಧಿಕಾ­ರಿಗಳಿಗೆ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಮುಖ್ಯಸ್ಥ ಪ್ರೊ.ಎಂ.ಶಿವ­ನಂಜಯ್ಯ ಅವರು 2011ರಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ದೊರೆತಿದೆ. ಆದರೆ ವಿವಿಧ ಕಾರಣಗಳಿಗಾಗಿ ಕಾಮಗಾರಿ ಆರಂಭಿಸಲು ಆಗಿರಲಿಲ್ಲ. ಇದೀಗ ನಿರ್ಮಾಣ ಕಾರ್ಯ ಆರಂಭಿಸಿದಾಗ ನಗರಸಭೆಯ ಅಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಾಜು, ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿದೇವರು, ಕೆಪಿಸಿಸಿ ಸದಸ್ಯ ಕೆ.ರಮೇಶ್, ಮುಖಂ­ಡರಾದ ಬಿ.ಉಮೇಶ್, ರಾಜಶೇಖರ್, ಚೇತನ್ ಕುಮಾರ್, ಡಿ.ಕೆ.ಶಿವಕು­ಮಾರ್, ಲೋಹಿತ್, ರಾಜಶೇಖರ್, ಚಂದ್ರಶೇಖರ್, ಕೆ.ಚಂದ್ರಯ್ಯ, ರೈಡ್ ನಾಗರಾಜ್, ಗಾಣಕಲ್ ನಟರಾಜ್, ದೊಡ್ಡಗಂಗವಾಡಿ ಗೋಪಾಲ್ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.