ADVERTISEMENT

ಕಾರ್ಯಕರ್ತರ ಘರ್ಷಣೆ: ಲಾಠಿ ಪ್ರಹಾರ‌

ತುಂಗಣಿಯಲ್ಲಿ ಕಲ್ಲು ತೂರಾಟ: ಕೈಕೈಮಿಲಾಯಿಸಿದ ಜೆಡಿಎಸ್‌, ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 9:33 IST
Last Updated 2 ಜುಲೈ 2015, 9:33 IST

ಕನಕಪುರ: ಗ್ರಾಮ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದು ಪೊಲೀಸರು ಲಾಠಿ ಪ್ರಹಾರ ಮಾಡಿದ ಘಟನೆ ಕಸಬಾ ಹೋಬಳಿ ತುಂಗಣಿಯಲ್ಲಿ ಬುಧವಾರ ನಡೆಯಿತು. ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಎಇಇ ಪ್ರಕಾಶ್ ಸ್ವತಃ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಕಲ್ಲು ತೂರಾಟ ನಡೆಸಿ ಗಲಾಟೆ ಮಾಡಿದರು.

ಪಂಚಾಯಿತಿಯ ಕಿಟಕಿ ಗಾಜುಗಳನ್ನು ಒಡೆದು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಕೈ ಮೀರುತ್ತಿದ್ದನ್ನು ಗಮನಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದರು.

ಪಂಚಾಯಿತಿಯಲ್ಲಿ ಅಧಿಕಾರಿಗಳು ಕಾಂಗ್ರೆಸ್ಸಿಗರ ಜತೆ ಶಾಮಿಲಾಗಿ ಅಕ್ರಮವೆಸಗುತ್ತಿದ್ದಾರೆ. ಚುನಾವಣಾಧಿಕಾರಿ ಕಾಂಗ್ರೆಸ್‌ನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಜೆಡಿಎಸ್ ಬೆಂಬಲಿತ ಸದಸ್ಯರನ್ನು ಅಧಿಕಾರದಿಂದ ತಪ್ಪಿಸಲು ಚುನಾವಣೆಯಲ್ಲಿ ಅಕ್ರಮವೆಸಗುತ್ತಿದ್ದಾರೆಂದು  ಮುಖಂಡರು ಪಂಚಾಯಿತಿ ಮುಂದೆ  ಧರಣಿ ನಡೆಸಿದರು.

ಘರ್ಷಣೆ: ಪಂಚಾಯಿತಿ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರ  ತಂಡವು ಪಂಚಾಯಿತಿ ಬಳಿ ಬಂದಿತು. ಎರಡು ಗುಂಪಿನವರು ಪರಸ್ಪರ ವಾಗ್ವಾದ ನಡೆಯಿತು. ಮಾತಿನ ಚಕಮಕಿ  ವಿಕೋಪಕ್ಕೆ ತಿರುಗಿ ಕೈಕೈಮಿಲಾಯಿಸಿದರು. ಹಲ್ಲೆ, ಪ್ರತಿಹಲ್ಲೆ ನಡೆಯಿತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತೆ ಪೊಲೀಸರು ಲಾಠಿ ಪ್ರಹಾರ ಮಾಡಿ ಎರಡು ಗುಂಪಿನವರನ್ನು ಚದುರಿಸಿದರು. ಚುನಾವಣೆಯಲ್ಲಿ ಚುನಾವಣಾಧಿಕಾರಿ ಅಕ್ರಮವೆಸಗಿ ಕಾಂಗ್ರೆಸ್‌ಗೆ ಸಹಾಯ ಮಾಡಿದ್ದಾರೆ. ಚುನಾವಣೆಯನ್ನು ಮತ್ತೆ ಮಾಡಬೇಕು. ಇಲ್ಲವೇ ಸದಸ್ಯರು ಯಾರಿಗೆ ಬೆಂಬಲ ನೀಡುತ್ತಾರೆಂದು ಕೈ ಎತ್ತಿಸಬೇಕೆಂದು ಜೆಡಿಎಸ್ ಮುಖಂಡರು ಪಟ್ಟು ಹಿಡಿದರು. ಇದಕ್ಕೆ ಕಾಂಗ್ರೆಸ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

‘ಒಂದು ಬಾರಿ ಚುನಾವಣೆಯಾಗಿದೆ. ಮತ್ತೊಮ್ಮೆ ಮಾಡಲು ಅವಕಾಶವಿಲ್ಲ. ಯಾರಿಗೆ ಎಷ್ಟು ಮತಗಳು ಲಭಿಸಿವೆ ಎಂದು ಎಣಿಕೆ ಮಾಡೋಣ’ ಎಂದರು. ಹೀಗಾಗಿ ಎರಡು ಪಕ್ಷದವರ ನಡುವೆ  ವಾಗ್ವಾದ ನಡೆಯಿತು.

ಅಂತಿಮವಾಗಿ ಚುನಾವಣಾಧಿಕಾರಿ ಪೊಲೀಸರು ಬಂದೋಬಸ್ತ್‌ನಲ್ಲಿ ಮತ ಎಣಿಕೆ ಮಾಡಿ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಬೆಂಬಲಿತ ಲಕ್ಷ್ಮಮ್ಮನಿಗೆ 9, ಜೆಡಿಎಸ್ ಬೆಂಬಲಿತ ಜಯಮ್ಮನಿಗೆ 8 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನದ ಜೆಡಿಎಸ್ ಬೆಂಬಲಿತ ರತ್ನಮ್ಮನಿಗೆ 9, ಕಾಂಗ್ರೆಸ್ ಬೆಂಬಲಿತ ಸುಲೋಚನಮ್ಮನಿಗೆ 8 ಮತಗಳು ದೊರೆತಿವೆ ಎಂದು ಘೋಷಿಸಿದರು.

ಒಪ್ಪದ ಕಾರ್ಯಕರ್ತರು: ಗ್ರಾಮ ಪಂಚಾಯಿತಿ 17 ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತರು 9, ಕಾಂಗ್ರೆಸ್ ಬೆಂಬಲಿತರು 8 ಮಂದಿ ಆಯ್ಕೆಯಾಗಿದ್ದರು. ಜೆಡಿಎಸ್ ಬೆಂಬಲಿತ 9 ಸದಸ್ಯರು ನಾವುಗಳು ಇಲ್ಲೇ ಇದ್ದೇವೆ, ನಾವು ಜೆಡಿಎಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಜಯಮ್ಮ ಮತ್ತು ಉಪಾಧ್ಯಕ್ಷ ಸ್ಥಾನದ ರತ್ನಮ್ಮನಿಗೆ 9 ಮತಗಳನ್ನು ಹಾಕಿದ್ದೇವೆ. ಅಧ್ಯಕ್ಷ ಸ್ಥಾನಕ್ಕೆ 8 ಮತ, ಉಪಾಧ್ಯಕ್ಷ ಸ್ಥಾನಕ್ಕೆ 9 ಮತ ಎಂದು ಚುನಾವಣಾಧಿಕಾರಿಗಳು ಲೆಕ್ಕ ಮಾಡಿದ್ದಾರೆ. ಇಲ್ಲಿ ಅನ್ಯಾಯ ನಡೆದಿದೆ, ಇದನ್ನು ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹೊರ ನಡೆದರು.

ಚುನಾವಣೆಯಲ್ಲಿ ಲಕ್ಷ್ಮಮ್ಮ 9 ಮತಗಳನ್ನು ಪಡೆದು ಅಧ್ಯಕ್ಷರಾಗಿಯೂ, ರತ್ನಮ್ಮ 9 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ. ಆದರೆ, ಅಧಿಕೃತವಾಗಿ ಪಂಚಾಯಿತಿಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ಪಂಚಾಯಿತಿ ಪ್ರಭಾರ ಅಭಿವೃದ್ದಿ ಅಧಿಕಾರಿ ಚಲುವರಾಮು ತಿಳಿಸಿದರು.

ಅಧ್ಯಕ್ಷ-ಉಪಾಧ್ಯಕ್ಷರ  ಚುನಾವಣೆಯಲ್ಲಿ  ಘರ್ಷಣೆಯಾಗಿದ್ದರಿಂದ ಪಂಚಾಯಿತಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಮೂರು ತುಕಡಿ ಮೀಸಲು ಪಡೆ ನಿಯೋಜಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಎಸ್‌ಐ ಮಹದೇವಸ್ವಾಮಿ ತಿಳಿಸಿದ್ದಾರೆ.

ಚುನಾವಣೆಯು ಕಾನೂನು ಬಾಹಿರವಾಗಿ ನಡೆದಿದ್ದು ಜೆಡಿಎಸ್ ಬೆಂಬಲಿತ 9 ಸದಸ್ಯರಿದ್ದಾರೆ.  ಚುನಾವಣಾಧಿಕಾರಿ ಕರ್ತವ್ಯ ಲೋಪದಿಂದ ಚುನಾವಣೆಯಲ್ಲಿ ಅವರೇ ಮತದಾನ ಮಾಡಿಕೊಂಡು ಕಾಂಗ್ರೆಸ್‌ಗೆ ಹೆಚ್ಚಿನ ಮತ ಬರುವಂತೆ ಮಾಡಿದ್ದಾರೆ. ಇದರ ವಿರುದ್ದ  ಜಿಲ್ಲಾಧಿಕಾರಿಗೆ ದೂರು ನೀಡಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್‌ ಬೆಂಬಲಿತ ಸದಸ್ಯರಾದ ರಾಜಗೋಪಾಲ್, ಕುಮಾರ್ ತಿಳಿಸಿದರು.  ಮೀಸಲಾತಿ ಅಡಿಯಲ್ಲಿ  ಅಧ್ಯಕ್ಷ ಸ್ಥಾನ ದೊರೆಯಬೇಕಿತ್ತು. ಕಾಂಗ್ರೆಸ್‌ ಕಿತಾಪತಿ ಮತ್ತು ಅಧಿಕಾರಿಗಳ ಕರ್ತವ್ಯ ಲೋಪದಿಂದ ನನಗೆ ಅನ್ಯಾಯವಾಗಿದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಮ್ಮ ತಿಳಿಸಿದರು.

ಕಾಂಗ್ರೆಸ್ ಮುಖಂಡರ ಕಿತಾಪತಿ ಮತ್ತು ಅಧಿಕಾರಿಗಳ ಕರ್ತವ್ಯ ಲೋಪದಿಂದ ಇಂದು ನನಗೆ ಅನ್ಯಾಯವಾಗಿದ್ದು ಅವಮಾನವಾಗಿದೆ
ಜಯಮ್ಮ, ಗ್ರಾ.ಪಂ. ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.