ADVERTISEMENT

ಕೆರೆ ಒತ್ತುವರಿ ತೆರವು ಆಂದೋಲನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 11:20 IST
Last Updated 2 ಸೆಪ್ಟೆಂಬರ್ 2014, 11:20 IST
ಮಾಗಡಿ ತಾಲ್ಲೂಕಿನ ಊಜುಗಲ್ಲು ಗ್ರಾಮದ ಅಗಸನ ಕಟ್ಟೆ ಕೆರೆಯ ಒತ್ತುವರಿ ತೆರವು ಆಂದೋಲನಕ್ಕೆ ಸೋಮವಾರ ತಹಶೀಲ್ದಾರ್‌ ಸಿ.ಎಚ್‌.ಶಿವಕುಮಾರ್‌ ಸಸಿನೆಟ್ಟು ಚಾಲನೆ ನೀಡಿದರು
ಮಾಗಡಿ ತಾಲ್ಲೂಕಿನ ಊಜುಗಲ್ಲು ಗ್ರಾಮದ ಅಗಸನ ಕಟ್ಟೆ ಕೆರೆಯ ಒತ್ತುವರಿ ತೆರವು ಆಂದೋಲನಕ್ಕೆ ಸೋಮವಾರ ತಹಶೀಲ್ದಾರ್‌ ಸಿ.ಎಚ್‌.ಶಿವಕುಮಾರ್‌ ಸಸಿನೆಟ್ಟು ಚಾಲನೆ ನೀಡಿದರು   

ಮಾಗಡಿ:  ‘ತಾಲ್ಲೂಕಿನಲ್ಲಿ ಅಕ್ರಮ­ವಾಗಿ ಒತ್ತುವರಿಯಾಗಿರುವ ಕೆರೆ, ಗೋಕಟ್ಟೆ, ಗುಂಡುತೋಪು, ಗೋಮಾಳ, ಖರಾಬ್‌ ಜಮೀನುಗಳನ್ನು ಒತ್ತುವರಿ­ದಾರರು ಸ್ವಯಂ ಪ್ರೇರಣೆ­ಯಿಂದ ಮುಂದೆ ಬಂದು ತೆರವು ಮಾಡುವ ಮೂಲಕ ಆಂದೋಲನಕ್ಕೆ ಸಹ­ಕಾರ ನೀಡಬೇಕು’ ಎಂದು ತಹ­ಶೀಲ್ದಾರ್‌ ಸಿ.ಎಚ್‌.ಶಿವಕುಮಾರ್‌ ಹೇಳಿದರು.

ತಾಲ್ಲೂಕಿನ ಊಜುಗಲ್ಲು ಗ್ರಾಮದ ಅಗಸನ ಕಟ್ಟೆ ಕೆರೆಯ ಒತ್ತುವರಿ ತೆರವು ಆಂದೋಲನಕ್ಕೆ  ಸೋಮವಾರ ಕೆರೆ­ಯಂಗ­ಳದಲ್ಲಿ ಸಸಿ ನೆಟ್ಟು ಅವರು ಚಾಲನೆ ನೀಡಿದರು.

‘ಅಗಸನ ಕಟ್ಟೆಯ ಕೆರೆಯ ಏರಿ ಒಡೆದುದ್ದರಿಂದ 30 ಗುಂಟೆ ಕೆರೆ­ಯಂಗಳವನ್ನು ಒತ್ತುವರಿ ಮಾಡ­ಲಾಗಿದೆ. ಒಟ್ಟು ಕೆರೆಯ ವಿಸ್ತೀರ್ಣ 2.25 ಗುಂಟೆ ಇದೆ. ಹಿಂದಿನವರು ಹಾಕಿದ್ದ ಪಾಣಿಕಟ್ಟುಗಳಿವೆ. ಆದರೂ ಈ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಚಲುವಯ್ಯ ಎಂಬಾತ ಕೆರೆಗೆ ಸೇರಿದ್ದ 20 ಗುಂಟೆಯಷ್ಟು ಕೆರೆಯ ಏರಿಯ ಭಾಗವನ್ನು ಒತ್ತುವರಿ ಮಾಡಿಕೊಂಡಿ­ದ್ದನ್ನು ಇಂದು ಗುರುತಿಸಿ ತೆರವು ಗೊಳಿ­ಸಲಾಗಿದೆ. ತಾಲ್ಲೂಕಿನಲ್ಲಿ ಒತ್ತುವರಿ­ಯಾಗಿರುವ ಎಲ್ಲಾ ಕೆರೆಗಳ ಒತ್ತುವರಿ­ಯನ್ನು ಯಾವ ಮುಲಾಜು ನೋಡದೆ ತೆರವು ಗೊಳಿಸುವಂತೆ ಕೆರೆ ಒತ್ತುವರಿ ಆಂದೋಲನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಊಜುಗಲ್ಲು ಕೆರೆಯ ಬಳಿ ಒತ್ತು­ವರಿಯಾಗಿರುವ ಕಂಚಿನ ಕಟ್ಟೆ ಕೆರೆ­ಯನ್ನು ಸಹ ಒತ್ತುವರಿ ತೆರವು­ಗೊಳಿಸುವಂತೆ ಗ್ರಾಮದ ರೈತರಾದ ಕುಮಾರ್‌, ಗಂಗಭೋರಮ್ಮ, ಗುಡ್ಡದಯ್ಯ ತಹಶೀಲ್ದಾರ್‌ ಅವರಲ್ಲಿ ಮನವಿ ಮಾಡಿದರು. ತಾಲ್ಲೂಕು ಸರ್ವೇಯರ್‌ ಪ್ರಭಾಕರ್‌, ಕಂದಾಯ ಅಧಿಕಾರಿ ವೆಂಕಟೇಶ್‌, ಕಾಳಾರಿ ಗ್ರಾಮದ ಗ್ರಾಮ ಲೇಖಪಾಲಕರಾದ ಚೈತ್ರಾ ಹಾಗೂ ಗ್ರಾಮದ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.