ADVERTISEMENT

ಕೇಂದ್ರ ಸಚಿವರ ಹೇಳಿಕೆಗೆ ಆಕ್ರೋಶ

ರಾಮನಗರದಲ್ಲಿ ಜೆಡಿಎಸ್‌ ಪ್ರತಿಭಟನೆ: ರೈತರ ಕ್ಷಮೆಯಾಚಿಸಲು ರಾಧಾ ಮೋಹನ್‌ಸಿಂಗ್‌ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 9:17 IST
Last Updated 28 ಜುಲೈ 2015, 9:17 IST

ರಾಮನಗರ: ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಕಂದಾಯ ಭವನದ ಎದುರು ಜೆಡಿಎಸ್‌ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ರೈತರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ರೈತರಲ್ಲಿ ಕ್ಷಮೆಯಾಚಿಸಬೇಕು. ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ಸಾಲಗಾರರಾಗಿರುವ ರೈತರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರಲ್ಲಿ ಸರ್ಕಾರಗಳ ಪಾತ್ರವೇ ಇಲ್ಲ ಎಂಬ ರೀತಿಯಲ್ಲಿ ರೈತರ ಆತ್ಮಹತ್ಯೆ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿರುವ ಸಚಿವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ. ರಾಜು ಮಾತನಾಡಿ  ರೈತರ ಆತ್ಮಹತ್ಯೆ ಕುರಿತು ಕೃಷಿ ಸಚಿವರ ಹೇಳಿಕೆ ಕೇಂದ್ರ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಇಡೀ ದೇಶಕ್ಕೆ ಆಹಾರವನ್ನು ಒದಗಿಸುತ್ತಿರುವ ಶ್ರಮ ಜೀವಿಗಳಾದ ರೈತರ ವಿರುದ್ದ ಯಾರೇ ಆಗಲಿ ಅವಹೇಳನಕಾರಿಯಾಗಿ ಮಾತನಾಡಬಾರದು ಎಂದರು.

ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಲು ಸರ್ಕಾರಗಳಿಗೆ ಯೋಗ್ಯತೆ ಇಲ್ಲದಿದ್ದ ಮೇಲೆ ರೈತರ ಕುರಿತು ಬೇಜವಾಬ್ದಾರಿ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ವೈಜ್ಞಾನಿಕ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕುತ್ತಿರುವ ರೈತ ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾನೆ.

ಸಚಿವರಿಗೆ ಈ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ರೈತರು ಕೌಟುಂಬಿಕ ಸಮಸ್ಯೆ, ಅನಾರೋಗ್ಯ, ವೈಯಕ್ತಿಕ ಕಾರಣ, ಮಾದಕ ವ್ಯಸನ, ವರದಕ್ಷಿಣೆ, ಭಗ್ನಪ್ರೇಮದ ಕಾರಣದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವುದಕ್ಕೆ ಮಂತ್ರಿಗಳಿಗೆ ಮನಸ್ಸಾದರೂ ಹೇಗೆ ಬರುತ್ತದೆಯೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೂಟಗಲ್ ದೇವೇಗೌಡ ಮಾತನಾಡಿ ತಕ್ಷಣವೇ ಕೇಂದ್ರ ಕೃಷಿ ಸಚಿವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ರೈತರಲ್ಲಿ ಕ್ಷಮೆಯಾಚಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು  ರೈತರ ಬೆಳೆಗೆ ವೈಜ್ಞಾನಿಕ ಬೆಲೆ ವೈಜ್ಞಾನಿಕ ಬೆಲೆ ನಿಗದಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ರಾಮನಗರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದೀಚೆಗೆ ಹತ್ತು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿಯವರೆವಿಗೂ ಪರಿಹಾರದ ಹಣ ಬಂದಿಲ್ಲ. ಜಿಲ್ಲೆಯ ಪ್ರಮುಖ ಬೆಳೆಗಳಾದ ರೇಷ್ಮೆ, ಬಾಳೆ, ಮಾವು ಫಸಲಿನ ಬೆಳೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ರೇಷ್ಮೆ ಬೆಳೆಗಾರರು ತಾವು ಬೆಳೆದ ರೇಷ್ಮೆ ಗೂಡಿಗೆ ಸೂಕ್ತ ಬೆಲೆ ದೊರೆಯದೆ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಎಫ್.ಆರ್. ಜಮಾಧಾರ್ ಅವರಿಗೆ ಮನವಿ ಪ್ರತ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.