ADVERTISEMENT

ಕ್ರಷರ್‌ ದೂಳಿನಲ್ಲೇ ಶಾಲಾ ಮಕ್ಕಳ ಕಲಿಕೆ!

ಆರ್.ಜಿತೇಂದ್ರ
Published 19 ಜುಲೈ 2017, 11:26 IST
Last Updated 19 ಜುಲೈ 2017, 11:26 IST
ರಾಮನಗರ ತಾಲ್ಲೂಕಿನ ಉರಗಳ್ಳಿ ಬಂಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪಕ್ಕದಲ್ಲಿಯೇ ಹೊಸ ಕ್ರಷರ್‌ ಘಟಕ ಆರಂಭಕ್ಕೆ ಸಿದ್ಧತೆ ನಡೆದಿರುವುದು
ರಾಮನಗರ ತಾಲ್ಲೂಕಿನ ಉರಗಳ್ಳಿ ಬಂಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪಕ್ಕದಲ್ಲಿಯೇ ಹೊಸ ಕ್ರಷರ್‌ ಘಟಕ ಆರಂಭಕ್ಕೆ ಸಿದ್ಧತೆ ನಡೆದಿರುವುದು   

ರಾಮನಗರ: ತಾಲ್ಲೂಕಿನ ಉರಗಳ್ಳಿ ಬಂಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕಟ್ಟಡಕ್ಕೆ ಹೊಂದಿಕೊಂಡಂತೆಯೇ ದೊಡ್ಡ ಕ್ರಷರ್‌ ಘಟಕಗಳು ತಲೆ ಎತ್ತುತ್ತಿದ್ದು, ಮಕ್ಕಳು ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. ಬಿಡದಿ ಹೋಬಳಿಯ ಗೋಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಸರ್ಕಾರಿ ಶಾಲೆಯ ಸುತ್ತಮುತ್ತ ಈಗಾಗಲೇ ಹತ್ತಾರು ಜಲ್ಲಿ ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿವೆ.

ಸುತ್ತಲಿನ ನಿವಾಸಿಗಳು ಹಾಗೂ ಶಾಲಾ ಮಕ್ಕಳಿಗೆ ನಿತ್ಯ ದೂಳಿನ ಸ್ನಾನವಾಗುತ್ತಿದೆ. ಹೀಗಿರು ವಾಗ ಶಾಲಾ ಕಟ್ಟಡಕ್ಕೆ ಅಂಟಿಕೊಂಡಂತೆಯೇ ಇದೀಗ ದೊಡ್ಡ ಕ್ರಷರ್‌ವೊಂದರ ನಿರ್ಮಾಣ ಕಾರ್ಯವು ಭರದಿಂದ ನಡೆದಿದೆ. ಕನಿಷ್ಠ ಶಾಲೆ ಸ್ಥಳಾಂತರಗೊಳ್ಳುವವರೆಗೂ ಕಾಯದೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ವಲಸೆ ಮಕ್ಕಳಿಗೆ ಆಶ್ರಯ:ಗೋಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಕ್ರಷರ್‌ಗಳಿವೆ. ಈ ಹಿಂದೆ ಇಲ್ಲಿ ಹೆಚ್ಚು ಕೂಲಿ ಕಾರ್ಮಿ ಕರು ದುಡಿಯುತ್ತಿದ್ದರು. ಕೆಲಸಕ್ಕೆಂದು ವಲಸೆ ಬರುವವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದಾಶಯದಿಂದ ಉರಗಳ್ಳಿ ಬಂಡೆಯ ಎತ್ತರದ ಪ್ರದೇಶದಲ್ಲಿ ಶಾಲೆ ಸ್ಥಾಪಿಸ ಲಾಯಿತು. 2006–07ರಲ್ಲಿ ಇದಕ್ಕಾಗಿ ಎರಡಂತಸ್ತಿನ ಕಟ್ಟಡವನ್ನು ನಿರ್ಮಿಸಿಕೊಡಲಾಗಿದೆ.

ADVERTISEMENT

ವರ್ಷಗಳ ಹಿಂದೆ ಶಾಲೆಯಲ್ಲಿ 40–50ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿ ದ್ದುದನ್ನು ಇಲ್ಲಿನ ಶಿಕ್ಷಕರು ನೆನಪು ಮಾಡಿಕೊಳ್ಳುತ್ತಾರೆ. ಆದರೆ ಕ್ವಾರಿಗಳಲ್ಲಿ ದೊಡ್ಡ ದೊಡ್ಡ ಯಂತ್ರಗಳು ಬಂದು ಕಾರ್ಮಿಕರ ಸಂಖ್ಯೆ ಕಡಿಮೆಯಾದಂತೆಲ್ಲ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಸದ್ಯ ಇಲ್ಲಿ 1ರಿಂದ 4ನೇ ತರಗತಿಯವರೆಗೆ 16 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಪ್ರದೇಶದ ಸುತ್ತಮುತ್ತ 250ರಿಂದ 300 ಕಾರ್ಮಿಕರು ವಾಸವಿದ್ದಾರೆ.

ಇದೇ ಕಟ್ಟಡದಲ್ಲಿ ಮಿನಿ ಅಂಗನವಾಡಿಯೂ ಕಾರ್ಯ ನಿರ್ವಹಿಸುತ್ತಿದ್ದು, 10ಕ್ಕೂ ಹೆಚ್ಚು ಪುಟ್ಟ ಮಕ್ಕಳು ಇಲ್ಲಿ ಕಲಿಯಲು ಬರುತ್ತಿದ್ದಾರೆ. ಪುಟ್ಟ ಮಕ್ಕಳೂ ದೂಳು ಸಹಿಸಿಕೊಂಡೇ ತರಗತಿಯಲ್ಲಿ ಕೂರಬೇಕಿದೆ.

ಹೊಸ ಕೊಠಡಿ, ಕಿಟಕಿ ಬಂದ್: ಬೆಟ್ಟ–ಗುಡ್ಡ ಪ್ರದೇಶವಾದ್ದರಿಂದ ಮಳೆಗಾಲ, ಚಳಿಗಾಲದಲ್ಲೂ ಗಾಳಿಯೊಡನೆ ವಿಪರೀತ ದೂಳು ತೇಲಿಬರುತ್ತಿದೆ. ಬೇಸಿಗೆಯಲ್ಲಂತೂ ಕೇಳುವಂತಿಲ್ಲ. ಹೀಗಾಗಿ ಇಡೀ ಕಟ್ಟಡದ ಎಲ್ಲ ಕಿಟಿಕಿಗಳ ಬಾಗಿಲುಗಳನ್ನು ಮುಚ್ಚಿ ಅರೆ ಕತ್ತಲೆಯಲ್ಲಿಯೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಮೇಲಿನ ಮಹಡಿಯ ಕೋಣೆಯನ್ನು ಸಂಪೂರ್ಣವಾಗಿ ಮುಚ್ಚಿ ಬಾಗಿಲಿಗೆ ಬೀಗ ಜಡಿಯಲಾಗಿದೆ. ಕೆಳ ಮಹಡಿಯಲ್ಲಿರುವ ಒಂದು ದೊಡ್ಡ ಕೋಣೆಯಲ್ಲಿಯೇ ನಾಲ್ಕು ತರಗತಿಯ ಜೊತೆಗೆ ಅಂಗನವಾಡಿಯ ಮಕ್ಕಳೂ ಕಲಿಯುತ್ತಿದ್ದಾರೆ.

‘ಬೆಳಕಿಗೆಂದು ಬಾಗಿಲು ತೆರೆದರೂ ದೂಳು ಒಳನುಗ್ಗುತ್ತದೆ. ಮಕ್ಕಳು ಕೂರುವ ನೆಲದ ಮೇಲೂ ಮಣ್ಣಿನ ಕಣಗಳ ಪದರವಿದೆ. ಹೀಗಾಗಿ ಎಲ್ಲ ಕಿಟಕಿಗಳನ್ನು ಮುಚ್ಚಿಯೇ ಪಾಠ ಮಾಡುತ್ತಿದ್ದೇವೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಇಲ್ಲಿನ ಶಿಕ್ಷಕ ನಾಗರಾಜು.

ನೀರಿನ ಕೊರತೆ: ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ದೂರದ ಮೂರು ಕಿಲೋಮೀಟರ್ ನಿಂದ ಕುಡಿಯಲು ನೀರು ಹೊತ್ತು ತರಲಾಗುತ್ತಿದೆ. ಹೀಗೆ ತಂದುಕೊಂಡೇ ಬಿಸಿಯೂಟ ಸಿದ್ಧಪಡಿಸಿ ಬಡಿಸಲಾಗುತ್ತಿದೆ. ಶಿಕ್ಷಕರೂ ಬಾಟಲಿ ಯಲ್ಲಿ ಮನೆಯಿಂದ ನೀರು ತೆಗೆದು ಕೊಂಡು ಬರುತ್ತಿದ್ದಾರೆ.

ಹೊಸ ಜಾಗಕ್ಕೆ ಹುಡುಕಾಟ
‘ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಸ್ತಾವ ಇದ್ದು, ಹೊಸ ಜಾಗ ಕೋರಿ ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಪ್ರಕ್ರಿಯೆಯು ಪರಿಶೀಲನೆಯ ಹಂತದಲ್ಲಿದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ. ‘ಹೊಸ ಜಾಗ ಗುರುತಿಸಿದಲ್ಲಿ ತಾವೇ ಹೊಸ ಕಟ್ಟಡ ಕಟ್ಟಿಸಿಕೊಡುವುದಾಗಿ ಕ್ರಷರ್ ಮಾಲೀಕರು ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ಸ್ಥಳಾಂತರಕ್ಕೆ ಮುಂಚೆಯೇ ಅವಸರ
ಶಾಲೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಮುನ್ನವೇ ಕ್ರಷರ್‌ ಘಟಕ ನಿರ್ಮಾಣ ಕೈಗೆತ್ತಿಕೊಂಡಿದ್ದು, ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

‘ಉದ್ದೇಶಿತ ಕ್ರಷರ್ ಘಟಕಕ್ಕೆ ಇಲಾಖೆ ವತಿಯಿಂದ 2012ರಲ್ಲಿಯೇ ಅನುಮತಿ ದೊರೆತಿದ್ದು, ಸದ್ಯ ಬಿ ಫಾರ್ಮ್ ನೀಡಲಾಗಿದೆ. ಆದರೆ ಕಾರ್ಯಾರಂಭ ಮಾಡಲು ‘ಸಿ’ ಫಾರ್ಮ್‌ನ ಅವಶ್ಯಕತೆ ಇದ್ದು, ಶಾಲೆ ಪಕ್ಕದಲ್ಲಿಯೇ ಇರುವ ಕಾರಣ ಅನುಮತಿಯನ್ನು ತಡೆ ಹಿಡಿಯಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಕ್ರಷರ್‌ ಘಟಕಗಳು ಗ್ರಾಮ ಅಥವಾ ಶಾಲೆಯಿಂದ ಕನಿಷ್ಠ 500 ಮೀಟರ್‌ ದೂರದಲ್ಲಿ ಇರಬೇಕು. ಹಾಗಿದ್ದಲ್ಲಿ ಮಾತ್ರ ಅನುಮತಿ ದೊರೆಯುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.