ADVERTISEMENT

ಕ್ಷೇತ್ರ ಅಭಿವೃದ್ಧಿಗೆ ಒಂದು ಅವಕಾಶ ಕೊಡಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 6:02 IST
Last Updated 28 ನವೆಂಬರ್ 2017, 6:02 IST
ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಎ.ಮಂಜುನಾಥ ಮಾತನಾಡಿದರು
ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಎ.ಮಂಜುನಾಥ ಮಾತನಾಡಿದರು   

ಮಾಗಡಿ: ‘ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನನಗೆ ಒಂದು ಬಾರಿ ಅವಕಾಶ ನೀಡಿ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಮನವಿ ಮಾಡಿದರು. ಬಾಚೇನಹಟ್ಟಿಯಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಮಾಗಡಿ ವಿಧಾನ ಸಭಾ ಕ್ಷೇತ್ರದಿಂದ 4 ಭಾರಿ ಶಾಸಕರಾಗಿ ಎಚ್‌.ಸಿ.ಬಾಲಕೃಷ್ಣ ಅವರನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದೀರಿ. 2018ರ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲು ಅವಕಾಶ ಮಾಡಿಕೊಡಬೇಕು. ಅಧಿಕಾರ ಇಲ್ಲದಿದ್ದರೂ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಅವರಿಂದ ₹350 ಕೋಟಿ ವೆಚ್ಚದಲ್ಲಿ ಹೇಮಾವತಿ ಕಾಮಗಾರಿ ಆರಂಭ ಮಾಡಿಸಿದ್ದೇನೆ. ಸಂಸದ ಡಿ.ಕೆ.ಸುರೇಶ್ ಅವರಿಂದ 64 ಕೆವಿ ಸ್ಟೇಷನ್ ನಿರ್ಮಾಣ ಮಾಡಿರುವೆ’ ಎಂದರು.

‘ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ನೈಸ್ ರಸ್ತೆಯಿಂದ ಮಾಗಡಿ ಮಾರ್ಗವಾಗಿ ಸಕಲೇಶಪುರದ ವರೆಗೂ 4 ಪಥದ ರಸ್ತೆಯನ್ನು ಮಂಜೂರು ಮಾಡಿಸಿದ್ದು, ಕೇಶಿಪ್ ವತಿಯಿಂದ ಅತೀ ಶೀಘ್ರದಲ್ಲೆ ರಸ್ತೆ ನಿರ್ಮಾಣಕ್ಕೆ ಚಾಲನೆ ಕೊಡಲಾಗುತ್ತದೆ, ಅಧಿಕಾರ ಇಲ್ಲದೆ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮುಂದಿನ ಬಾರಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದರು.

ADVERTISEMENT

‘ಶಾಸಕರ ಬೆಂಬಲಿಗರು ನನ್ನ ವಿರುದ್ಧ ಅಪ ಪ್ರಚಾರಕ್ಕೆ ಇಳಿದಿದ್ದಾರೆ. ನಾನು ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜನಸೇವೆ ಮಾಡಲು ಬಂದಿದ್ದು ನನ್ನ ವಿರೋಧಿಗಳ ಅಪ ಪ್ರಚಾರಕ್ಕೆ ಕಿವಿಕೊಡಬಾರದು’ ಎಂದು ಮನವಿ ಮಾಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮಾತನಾಡಿ, 2018ರಲ್ಲಿ ಮತದಾರರು ಎಚ್‌.ಸಿ.ಬಾಲಕೃಷ್ಣ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯಕ್ಕೆ ಎಚ್‌.ಡಿ.ಕುಮಾರಸ್ವಾಮಿ, ಮಾಗಡಿಗೆ ಎ.ಮಂಜುನಾಥ ಎಂಬುದು ಪ್ರತಿಯೊಬ್ಬ ಮತದಾರರ ಬಾಯಿಯಲ್ಲೂ ಕೇಳಿ ಬರುತ್ತಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರ್, ವಾಟರ್ ಬೋರ್ಡ್‌ ರಾಮಣ್ಣ, ಜೆಡಿಎಸ್ ಮುಖಂಡರಾದ ಗುಡ್ಡೇಗೌಡ, ಮುದ್ದಹನುಮೇಗೌಡ, ನಾಗರಾಜು, ಕಲ್ಲೂರು ಮಂಜುನಾಥ್, ಸೀತಾರಾಂ, ರಂಗಣ್ಣ, ಅಶೋಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.