ADVERTISEMENT

ಚನ್ನಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 10:26 IST
Last Updated 3 ಸೆಪ್ಟೆಂಬರ್ 2015, 10:26 IST

ಚನ್ನಪಟ್ಟಣ: ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಚನ್ನಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದ ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ, ಬ್ಯಾಂಕ್‌ಗಳು, ಅಂಚೆ ಕಚೇರಿ, ಕಾರ್ಖಾನೆಗಳು, ಕೆಲವು ಹೋಟೆಲ್‌ಗಳು, ಖಾಸಗಿ ಶಾಲಾ ಕಾಲೇಜುಗಳು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದ್ದವು.

ಬೆಳಿಗ್ಗೆಯಿಂದಲೇ ಬಂದ್ ಎಂಬ ವಿಷಯ ತಿಳಿದಿದ್ದರಿಂದ ಗ್ರಾಮೀಣ ಪ್ರದೇಶದ ಮಂದಿ ಪಟ್ಟಣದ ಕಡೆಗೆ ತಲೆಹಾಕಲಿಲ್ಲ. ಗ್ರಾಮೀಣ ಪ್ರದೇಶದ ಕೆಲವು ಸ್ಥಳಗಳಲ್ಲಿ ರಾತ್ರಿ ತಂಗಿದ್ದ ಸರ್ಕಾರಿ ಬಸ್‌ಗಳು ಬೆಳಿಗ್ಗೆ ಪಟ್ಟಣದ ಕಡೆಗೆ ಬಂದವಾದರೂ ನಂತರ ಸೇವೆ ಸ್ಥಗಿತಗೊಳಿಸಿದವು. ಬೆಳಿಗ್ಗೆ ಪಟ್ಟಣದ ಕಡೆಗೆ ಬಂದ ಕೆಲವರು ನಂತರ ಖಾಸಗಿ ಬಸ್‌ಗಳನ್ನು ಆಶ್ರಯಿಸಬೇಕಾಯಿತು.

ಖಾಸಗಿ ಬಸ್‌ಗಳು, ಆಟೋಗಳು, ಆಪೆ ಆಟೋಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಸರ್ಕಾರಿ ಬಸ್‌ಗಳು, ಖಾಸಗಿ ವಾಹನಗಳು ಇಲ್ಲದ್ದರಿಂದ ಬೆಂಗಳೂರು-ಮೈಸೂರು ರಸ್ತೆ ಬಿಕೋ ಎನ್ನುತ್ತಿತ್ತು. ಕೆಲವು ವಾಹನಗಳು ಮಾತ್ರ ಆಗಾಗ ಓಡಾಡುತ್ತಿದ್ದವು. ಸರ್ಕಾರಿ ಬಸ್ ಇಲ್ಲದ ಕಾರಣ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಜನರಿಲ್ಲದೆ ಸಂಪೂರ್ಣ ಬಿಕೋ ಎನ್ನುತ್ತಿತ್ತು. ಸರ್ಕಾರಿ ಬಸ್‌ಗಳು ಡಿಪೋದಲ್ಲಿ ಆಶ್ರಯ ಪಡೆದಿದ್ದವು.

ಖಾಸಗಿ ಶಾಲಾ ಕಾಲೇಜುಗಳು ಬಂದ್ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಿದ್ದವು. ಕೆಲವು ಖಾಸಗಿ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಶಾಲಾ ಕಾಲೇಜುಗಳು ರಜೆ ಬಗ್ಗೆ ಯಾವುದೇ ಮಾಹಿತಿ ನೀಡದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಬೀಳುವಂತಾಯಿತು. ರಜೆ ಬಗ್ಗೆ ತಿಳಿಯದ ವಿದ್ಯಾರ್ಥಿಗಳು ಬೆಳಿಗ್ಗೆ ಶಾಲಾ ಕಾಲೇಜುಗಳ ಬಳಿಗೆ ಬಂದು ನಂತರ ರಜೆ ವಿಷಯ ತಿಳಿದು ಬೇಸರದಿಂದ ತೆರಳುವಂತಾಯಿತು.

ಅಂಚೆ ಕಚೇರಿ ನೌಕರರು ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಸ್ವಲ್ಪಹೊತ್ತು ಧರಣಿ ನಡೆಸಿದ್ದು ಬಿಟ್ಟರೆ ಪಟ್ಟಣದಲ್ಲಿ ಯಾವುದೇ ಮೆರವಣಿಗೆ, ರಸ್ತೆತಡೆ ನಡೆಯಲಿಲ್ಲ. ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರಗಳು, ಮಾರುಕಟ್ಟೆ, ರೇಷ್ಮೆ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಜನರು ವಿರಳವಾಗಿದ್ದ ಕಾರಣ ಮೌನದ ವಾತಾವರಣವಿತ್ತು.

ಪ್ರತಿದಿನ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪಟ್ಟಣದ ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಪೇಟೆ ಬೀದಿ, ಅಂಚೆಕಚೇರಿ ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ಬ್ಯಾಂಕ್ ಸೇವೆ ಇಲ್ಲದಿದ್ದರಿಂದ ಗ್ರಾಹಕರು ಬ್ಯಾಂಕ್ ಕಡೆಗೆ ಸುಳಿಯಲಿಲ್ಲ.

ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು, ಔಷಧಿ ಅಂಗಡಿ ಎಂದಿನಂತೆ ಕಾರ್ಯನಿರ್ವಹಿಸಿದವು. ಒಟ್ಟಾರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.