ADVERTISEMENT

‘ಜನಪದ ಕಲೆಗಳ ಸಂರಕ್ಷಣೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 12:19 IST
Last Updated 24 ಮಾರ್ಚ್ 2018, 12:19 IST

ಚನ್ನಪಟ್ಟಣ: ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ತತ್ತರಿಸುತ್ತಿರುವ ಜನಪದ ಕಲೆಗಳ ಸಂರಕ್ಷಣೆಯಲ್ಲಿ ಸಮಾಜಮುಖಿ ಸಂಘ–ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಾರ್ವಜನಿಕ ಆಸ್ಪತ್ರೆ ಅಧೀಕ್ಷಕ ಡಾ.ಮಹೇಂದ್ರ ಕುಮಾರ್ ಶ್ಲಾಘಿಸಿದರು.

ಅಪ್ಪಗೆರೆಯ ಜ್ಞಾನಜ್ಯೋತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಬಾಲ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಗೀತೆಗಳ ಗಾಯನ ಹಾಸುಹೊಕ್ಕಾಗಿತ್ತು. ನಮ್ಮ ಹಿರಿಯರು ಅವುಗಳನ್ನು ತಮ್ಮ ಬದುಕಿನ ಒಂದು ಅಂಗ ಎಂಬಂತೆ ಬೆಳೆಸಿಕೊಂಡು ಬಂದಿದ್ದರು. ಆದರೆ ಇಂದು ಇಂತಹ ಕಲೆಗಳನ್ನು ಕಾಣುವುದೇ ಅಪರೂಪವಾಗಿದೆ. ಗ್ರಾಮೀಣ ಆಚರಣೆಗಳ ಜಾಗವನ್ನು ಸಾಮಾಜಿಕ ಮಾಧ್ಯಮಗಳು ಆವರಿಸಿಕೊಳ್ಳುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಮುಖಂಡ ಹನುಮಂತಯ್ಯ ಮಾತನಾಡಿ, ಸರ್ಕಾರವು ಪಟ್ಟಣದ ಶತಮಾನೋತ್ಸವ ಭವನದ ಬಾಡಿಗೆ ದರವನ್ನು ಕಡಿತಗೊಳಿಸುವ ಮೂಲಕ ಕಲಾವಿದರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಪತ್ರಕರ್ತ ಡಿ.ಎಂ.ಮಂಜುನಾಥ್ ಅಧ್ಯಕ್ಷತೆ ವಹಿಸಿ, ಜಾನಪದ ಕಲೆಯನ್ನು ಜೀವಂತವಾಗಿಸುತ್ತಿರುವ ಪ್ರಾಮಾಣಿಕ ಕಲಾವಿದರು ಹಣ ಸಂಪಾದಿಸುವುದನ್ನೇ ಕಾಯಕವನ್ನಾಗಿಸಿಕೊಂಡಿರುವ ಜನರ ಮಧ್ಯೆ ಸಿಲುಕಿ ನರಳುವಂತಾಗಿದೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ ಎಂದರು.

ವೈದ್ಯ ಲೋಕಾನಂದ್, ದಲಿತ ಮುಖಂಡ ವೆಂಕಟಚಲ್ಲಯ್ಯ, ಅಪ್ಪಗೆರೆ ಶಿವಮೂರ್ತಿ, ಚಕ್ಕಲೂರು ಚೌಡಪ್ಪ, ಶಿವರಾಮ್ ಬಿಎಸ್‍ಪಿ, ಶೆಟ್ಟಿಹಳ್ಳಿ ಶಿವಪ್ಪ ವೇದಿಕೆಯಲ್ಲಿದ್ದರು.

ಕಲಾ ಪ್ರದರ್ಶನ: ಪೂಜಾ ಕುಣಿತ, ವೀರಗಾಸೆ, ತಮಟೆ ವಾದನ, ಗಾರುಡಿಗೊಂಬೆ ಕಲಾ ಪ್ರಕಾರಗಳು ನೋಡುಗರ ಗಮನ ಸೆಳೆದವು.

ಕಲಾವಿದರಾದ ಮಹಾದೇವಸ್ವಾಮಿ, ಬೋವೂರು ರಾಮಯ್ಯ, ಚಕ್ಕೆರೆ ಲೋಕೇಶ್, ಹೊನ್ನಿಗಾನಹಳ್ಳಿ ಸಿದ್ಧರಾಜು, ಸರ್ವೋತ್ತಮ್, ಜಾಗೃತಿ ಪುಟ್ಟಸ್ವಾಮಿ, ಪ್ರಭಾಕರ್, ಕುಂತೂರುದೊಡ್ಡಿ ಪುಟ್ಟರಾಜು, ಸುರೇಶ್ ರಾಂಪುರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.