ADVERTISEMENT

‘ಜನಪರ್ಯಾಯ ಕಟ್ಟೋಣ ಜಾಥಾ’17ರಿಂದ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 10:33 IST
Last Updated 6 ಏಪ್ರಿಲ್ 2017, 10:33 IST

ರಾಮನಗರ: ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳ ರಾಜಕಾರಣದ ವಿರುದ್ಧ ಜನಾಂದೋಲನಗಳ ಮಹಾಮೈತ್ರಿ ಒಕ್ಕೂಟವು ಇದೇ 17ರಿಂದ 27ರವರೆಗೆ ‘ಜನಪರ್ಯಾಯ ಕಟ್ಟೋಣ ಜಾಥಾ’ ಹಮ್ಮಿಕೊಂಡಿದೆ.

‘ರಾಜ್ಯದ ಒಟ್ಟು 11 ಜಿಲ್ಲೆಗಳಲ್ಲಿ ಈ ಮೊದಲ ಹಂತದ ಜಾಥಾ ನಡೆಯಲಿದ್ದು, ಭ್ರಷ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಜನರನ್ನು ಜಾಗೃತಿಗೊಳಿಸಿ ಅವರನ್ನು ಪರ್ಯಾಯ ರಾಜಕಾರಣದತ್ತ ಸಂಘಟಿಸುವುದು ಇದರ ಮೂಲ ಉದ್ದೇಶವಾಗಿದೆ’ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇದೇ 17ರಂದು ಮಂಡ್ಯದ ಸಿಲ್ವರ್‌ ಜ್ಯೂಬಿಲಿ ಪಾರ್ಕಿನ ಆವರಣದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ಈ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.

ADVERTISEMENT

18ರಂದು ಜಾಥಾ ರಾಮನಗರದಲ್ಲಿ ಸಂಚರಿಸಲಿದೆ. ಅಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕ ಸಮಾವೇಶ
ನಡೆಯಲಿದೆ.  

ನಂತರ ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಗದಗ ಮೊದಲಾದ ಜಿಲ್ಲೆಗಳಲ್ಲಿ ಈ ಜಾಥಾ ಮುಂದುವರಿಯಲಿದೆ.

ಸಾಹಿತಿ ದೇವನೂರ ಮಹದೇವ, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ,  ಶಾಸಕ ಕೆ.ಎಸ್ .ಪುಟ್ಟಣ್ಣಯ್ಯ, ರಾಘವೇಂದ್ರ ಕುಷ್ಟಗಿ, ನೂರ್ ಶ್ರೀಧರ್, ನಂದಿನಿ ಜಯರಾಂ, ಗುರುಪ್ರಸಾದ್ ಕೆರಗೋಡು, ಡಾ.ವಾಸು ಮತ್ತಿತರರು ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ವಿವರಿಸಿದರು.

ಪರ್ಯಾಯ ಅನಿವಾರ್ಯ: ‘ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಜನತಾದಳ, ಕಾಂಗ್ರೆಸ್‌ ಹಾಗೂ ಬಿಜೆಪಿ ಈ ನಾಡನ್ನು ಜೆಸಿಬಿ ಯಂತ್ರದಂತೆ ಬಗೆದು ತಿನ್ನುತ್ತಿವೆ. ಇವುಗಳ ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಪರ್ಯಾಯವಾದ ರಾಜಕೀಯ ವ್ಯವಸ್ಥೆಯು ನಾಡಿಗೆ ಅವಶ್ಯವಾಗಿ ಬೇಕಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಜನಾಂದೋಲನಗಳ ಮಹಾಮೈತ್ರಿಯನ್ನು ಸಂಘಟಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧ ಸಾಗುತ್ತಿರುವ ವ್ಯವಸ್ಥೆಯನ್ನು ಎಚ್ಚರಿಸಿ, ಹೊಸ ಚಳವಳಿಯ ರೂಪ ಕೊಡುವ ಕಾರ್ಯ ಈ ವೇದಿಕೆಯು ಮಾಡಲಿದೆ’ ಎಂದು ಸ್ವರಾಜ್ ಅಭಿಯಾನ ಸಂಘಟನೆಯ ಅಧ್ಯಕ್ಷ ದೊಡ್ಡಿಪಾಳ್ಯ ನರಸಿಂಹಮೂರ್ತಿ ಹೇಳಿದರು.

ಜನ ಸಂಗ್ರಾಮ ಪರಿಷತ್ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ, ಮಾಹಿತಿ ಹಕ್ಕು ಕಾರ್ಯಕರ್ತ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

**

ಬರ ನಿರ್ವಹಣೆಯಲ್ಲಿ  ವಿಫಲ: ದೂರು
‘ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಆಧಾರ್‌ ಲಿಂಕ್‌ ಮಾಡಿ ರೈತರಿಗೆ ಬೆಳೆನಷ್ಟ ಪರಿಹಾರದ ಹಣವನ್ನು ತಲುಪಿಸುವಲ್ಲಿ  ಜಿಲ್ಲಾಡಳಿತ ಸೋತಿದೆ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ. ರಾಮು ದೂರಿದರು.

‘ಬರ ಪರಿಹಾರದ ಹಣ ಕೆಲವರಿಗಷ್ಟೇ ತಲುಪಿದೆ. ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಇನ್ನೂ ಮೇವಿನ ಬವಣೆ ತಪ್ಪಿಲ್ಲ. ಚನ್ನಪಟ್ಟಣ ತಾಲ್ಲೂಕಿನಲ್ಲಿ ಮೇವಿನ  ವಿತರಣೆ ಇನ್ನೂ ಸಮರ್ಪಕವಾಗಿ ಆಗಿಲ್ಲ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.