ADVERTISEMENT

‘ಜಾತ್ಯತೀತ ನಿಲುವೇ ಗಾಂಧೀಜಿ ಹತ್ಯೆಗೆ ಕಾರಣ’

ಸ್ವಾತಂತ್ರ್ಯದಲ್ಲಿ ಗಾಂಧೀಜಿ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 9:13 IST
Last Updated 31 ಜನವರಿ 2017, 9:13 IST
‘ಜಾತ್ಯತೀತ ನಿಲುವೇ ಗಾಂಧೀಜಿ ಹತ್ಯೆಗೆ ಕಾರಣ’
‘ಜಾತ್ಯತೀತ ನಿಲುವೇ ಗಾಂಧೀಜಿ ಹತ್ಯೆಗೆ ಕಾರಣ’   
ಚನ್ನಪಟ್ಟಣ: ಮಹಾತ್ಮ ಗಾಂಧೀಜಿಅವರ ಜಾತ್ಯತೀತ ನಿಲುವು ಅವರ ಹತ್ಯೆಗೆ ಕಾರಣವಾಯಿತು ಎಂದು ನಿವೃತ್ತ ಶಿಕ್ಷಕ ಪುಟ್ಟಮಾದೇಗೌಡ ಅಭಿಪ್ರಾಯಪಟ್ಟರು.
 
ಪಟ್ಟಣದ ಮಂಗಳವಾರಪೇಟೆಯ ವೆಬ್ ಸ್ಟರ್ ಆಂಗ್ಲಶಾಲೆಯಲ್ಲಿ ಸಿರಿಚಂದನ ಸಾಂಸ್ಕೃತಿಕ ಸಾಮಾಜಿಕ ವೇದಿಕೆ ವತಿಯಿಂದ ಹುತಾತ್ಮರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮ ಗಾಂಧೀಜಿ ಅವರ ಪಾತ್ರ ಕುರಿತ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
 
ಮಹಾತ್ಮ ಗಾಂಧೀಜಿ ವಿಭಿನ್ನ ಸಂಸ್ಕೃತಿ, ಸಂಸ್ಕಾರ, ವೈಚಾರಿಕತೆ, ಧಾರ್ಮಿಕತೆಯಲ್ಲಿ ಏಕತೆಯನ್ನು ಸಾರುವ ಒಂದೇ ಉದ್ದೇಶದಿಂದ ಶಾಂತಿಮಂತ್ರ ಜಪಿಸಿದ ಕಾರಣ ಅಕಾಲ ಮರಣಕ್ಕೆ ತುತ್ತಾಗಬೇಕಾಯಿತು. ಮಕ್ಕಳು ಅವರ ತತ್ವ, ಆದರ್ಶಮಯ ಸರಳ ಜೀವನವನ್ನು ಅನುಸರಿಸಲು ಇಂತಹ ಕಾರ್ಯಕ್ರಮ ದಾರಿದೀಪವಾಗಲಿವೆ ಎಂದರು.
 
ಭರತನಾಟ್ಯ ಕಲಾವಿದ ಎಂ.ಸಿ.ಸುಜೇಂದ್ರಬಾಬು ಮಾತನಾಡಿ, ‘ಗಾಂಧೀಜಿ ಅಹಿಂಸಾ ತತ್ವವನ್ನು ಅನುಸರಿಸಿದ ಕಾರಣದಿಂದಲೇ ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸಿದೆ. ಜಾತ್ಯತೀತ ರಾಷ್ಟ್ರದಲ್ಲಿ ಜೀವಿಸುತ್ತಿರುವ ನಾವು ಜಾತಿವಾದ, ಪ್ರಾದೇಶಿಕವಾದ ಬದಿಗೊತ್ತಿ ಪ್ರೀತಿ, ವಿಶ್ವಾಸ, ಶಾಂತಿ, ಸಹಬಾಳ್ವೆಯಿಂದ ಬದುಕಲು ಮುಂದಾದಾಗ ಮಾತ್ರ ಸದೃಢ ರಾಷ್ಟ್ರವನ್ನು ಕಟ್ಟಿ ಮುನ್ನಡೆಸಬಹುದು’ ಎಂದರು.
 
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿ ಪಟೇಲ್ ಸಿ.ರಾಜು ಮಾತನಾಡಿ, ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ಓದಿ ದೇಶಪ್ರೇಮ, ಸಮಾಜಸೇವೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
 
ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಿಚಂದನ ಸಾಂಸ್ಕೃತಿಕ ಸಾಮಾಜಿಕ ವೇದಿಕೆಯ ಅಧ್ಯಕ್ಷ ಡಿ.ಪುಟ್ಟಸ್ವಾಮಿಗೌಡ, ಗಾಂಧೀಜಿ ಹತ್ಯೆ ಮಾಡಿದ್ದು ಸಹಿಸಲು ಮತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ವಿಚಾರ ಎಂದರು.
 
ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ರೈತ ಮುಖಂಡ ಎಂ.ಡಿ.ಶಿವಕುಮಾರ್, ಮುಖ್ಯ ಶಿಕ್ಷಕ ರವಿಕುಮಾರ್ ಗೌಡ, ಶಿಕ್ಷಕಿಯರಾದ ಸಿ.ಎ.ಸವಿತಾ, ಸರ್ವಮಂಗಳ, ಕನಕಲಕ್ಷ್ಮಿ, ಕೆ.ಎಸ್.ಮಹಾಲಕ್ಷ್ಮಿ ಭಾಗವಹಿಸಿದ್ದರು.
 
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.