ADVERTISEMENT

ದೇವೇಗೌಡರಿಗೆ ಕುಟುಂಬದ ಅಭಿವೃದ್ಧಿಯೇ ಮುಖ್ಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 6:00 IST
Last Updated 28 ನವೆಂಬರ್ 2017, 6:00 IST

ಮಾಗಡಿ: ನಾಡಿನ ಅಭಿವೃದ್ಧಿಗಿಂತ ಕುಟುಂಬ ರಾಜಕಾರಣದ ಅಭಿವೃದ್ದಿಯೇ ಎಚ್‌.ಡಿ.ದೇವೇಗೌಡರಿಗೆ ಮುಖ್ಯವಾಗಿದೆ ಎಂಬುದು ಜನತೆಗೆ ತಿಳಿದಿದೆ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.ಜ್ಯೋಗಿ ಪಾಳ್ಯದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಜೆಡಿಎಸ್‌ ಪಕ್ಷದಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಮ್ಮ ತಂದೆ ಕಾಂಗ್ರೆಸ್‌ ಪಕ್ಷದಲ್ಲಿ ಇದ್ದವರು, ನಾಲ್ಕು ಬಾರಿ ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರು ಜೆಡಿಎಸ್‌ ಪಕ್ಷ ನೋಡದೆ ವೈಯಕ್ತಿಕವಾಗಿ ನಮ್ಮ ಕುಟುಂಬ ಮತ್ತು ನನ್ನ ಕಾರ್ಯಕ್ಷಮತೆಯನ್ನು ನೋಡಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ನನ್ನಲ್ಲಿನ ಆತ್ಮವಿಶ್ವಾಸ ಮತ್ತು ಮತದಾರರೊಂದಿಗಿನ ಅವಿನಾಭಾವ ಸಂಬಂಧ ನೋಡಿ ನನಗೆ ಶ್ರೀರಕ್ಷೆಯಾಗಿದ್ದಾರೆ’ ಎಂದರು.

‘2018ರ ಚುನಾವಣೆಯಲ್ಲಿ ಎಚ್‌.ಸಿ,ಬಾಲಕೃಷ್ಣ ಮುಖ್ಯವೋ ಅಥವಾ ಪಕ್ಷ ಮುಖ್ಯವೋ ಎಂಬುದನ್ನು ನೋಡೋಣ. ಜೆಡಿಎಸ್‌ ನಲ್ಲಿ ಕುಟುಂಬ ರಾಜಕಾರಣವಿದೆ, ಕಾಂಗ್ರೆಸ್‌ ಪಕ್ಷದಲ್ಲಿ ಸರ್ವರಿಗೂ ಅಧಿಕಾರ ಸಿಕ್ಕಲಿದೆ’ ಎಂದು ತಿಳಿಸಿದರು.

ADVERTISEMENT

‘ತಾಲ್ಲೂಕಿನಲ್ಲಿ ಸ್ವಂತ ಕಟ್ಟಡ ಇಲ್ಲದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನಮ್ಮ ತಾಯಿ ತಂದೆಯ ಹೆಸರಿನಲ್ಲಿ ನಿವೇಶನ ಖರೀದಿಸಿ ಕೊಡುವೆ. ಆದರೆ ಸ್ಥಳೀಯರು ನಿವೇಶನ ತೋರಿಸಿ ಕೊಡಬೇಕು’ ಎಂದರು.

‘ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣ ಅವರು ಶಾಸಕರು ಬಂದರೆ ಜನ ಸೇರೋಲ್ಲ, ಎ.ಮಂಜುನಾಥ ಬಂದರೆ ಜನ ಸೇರುತ್ತಾರೆ ಎಂಬುದಾಗಿ ಮಾತನಾಡಿದ್ದಾರೆ ಎಂಬ ವಾಟ್ಸ್‌ ಆ್ಯಪ್‌ ಸಂದೇಶದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ, ‘ತಾಲ್ಲೂಕಿನ ಮತದಾರ ಪ್ರಭು ಬಾಲಕೃಷ್ಣ ರಾಜಕಾರಣ ಮಾಡುವುದು ಬೇಡ ಎಂದರೆ ಮನೆಯಲ್ಲಿ ಕುಳಿತುಕೊಳ್ಳುತ್ತೇನೆಯೇ ವಿನಾ ರಾಜಕಾರಣ ಮಾಡಲು ದೇಗುಲಗಳಿಗೆ ಹೋಗಿ ಇನ್ನೊಬ್ಬರ ವಿರುದ್ದ ಮಾಟಮಂತ್ರ ಮಾಡಿಸುವ ಜಾಯಮಾನ ನನ್ನದಲ್ಲ. ಮತದಾರರ ವಿಶ್ವಾಸ ನನ್ನ ಮೇಲೆ ಇರುವವರೆಗೆ ಅವರ ಸೇವೆಯನ್ನು ದೇವರ ಸೇವೆ ಎಂದು ಮಾಡುತ್ತೇನೆ’ ಎಂದು ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಿಕ್ಕರಂಗಯ್ಯ, ಉಪಾಧ್ಯಕ್ಷ ಪ್ರಕಾಶ್‌, ವೆಂಕಟೇಶ್‌, ಮುನಿರಾಜು ಹಾಗೂ ಜ್ಯೋಗಿ ಪಾಳ್ಯದ ಹಾಲು ಉತ್ಪಾದಕ ಸಹಕಾರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.