ADVERTISEMENT

ನಾಳೆಯಿಂದ ಇಂದ್ರ ಧನುಷ್‌ ಅಭಿಯಾನ

ಮೂರು ಸುತ್ತಿನ ಲಸಿಕಾ ಕಾರ್ಯಕ್ರಮ, ಜಿಲ್ಲೆಯ 12 ಗ್ರಾಮಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 9:51 IST
Last Updated 22 ಮೇ 2018, 9:51 IST
ನಾಳೆಯಿಂದ ಇಂದ್ರ ಧನುಷ್‌ ಅಭಿಯಾನ
ನಾಳೆಯಿಂದ ಇಂದ್ರ ಧನುಷ್‌ ಅಭಿಯಾನ   

‌ರಾಮನಗರ: ಗ್ರಾಮ ಸ್ವರಾಜ್ಯ ಅಭಿಯಾನದ ಅಡಿಯಲ್ಲಿ ಲಸಿಕಾ ಕಾರ್ಯಕ್ರಮ ‘ತೀವ್ರ ಇಂದ್ರ ಧುನುಷ್‌ ಅಭಿಯಾನ’ವನ್ನು ಇದೇ 23 ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಗರ್ಭಿಣಿಯರು, 6‌ ವರ್ಷದ ಒಳಗಿನ ಮಕ್ಕಳಿಗೆ ತಲುಪುವ ಉದ್ದೇಶದಿಂದ ಜಿಲ್ಲೆಯಲ್ಲಿ 12ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮದಲ್ಲಿ ವಿಶೇಷವಾಗಿ ತೀವ್ರ ಇಂದ್ರ ಧನುಷ್‌ ಅಭಿಯಾನದ ಮೂಲಕ ಮೂರು ಸುತ್ತಿನಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದೇ 23ರಿಂದ 26ರವರೆಗೆ ಮೊದಲನೇ ಸುತ್ತು, ಜೂನ್ 20ರಿಂದ 23ರವರೆಗೆ ಎರಡನೇ ಸುತ್ತು, ಜುಲೈ18ರಿಂದ 21ರವರೆಗೆ ಮೂರನೇ ಸುತ್ತಿನಲ್ಲಿ ಲಸಿಕೆ ಹಾಕಲಾಗುತ್ತದೆ.

ADVERTISEMENT

ಜಿಲ್ಲೆಯ 12ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ 12 ಗ್ರಾಮಗಳಲ್ಲಿ ಮನೆ ಮನೆ ಭೇಟಿ ನೀಡಿ ಕುಟುಂಬಗಳ ಸಮೀಕ್ಷೆ ನಡೆಸಿ, 24 ಗರ್ಭಿಣಿಯರು, 2ವರ್ಷದ ಒಳಗಿನ 127 ಮಕ್ಕಳು, 5 ರಿಂದ -6 ವರ್ಷದ 123 ಮಕ್ಕಳನ್ನು
ಗುರುತಿಸಲಾಗಿದೆ.

ಈ ಎಲ್ಲ ಅರ್ಹ ಫಲಾನುಭವಿಗಳಿಗೆ ಗರ್ಭಿಣಿಯರಿಗೆ – ಟಿಟಿ ಲಸಿಕೆ(ಧನುರ್ವಾಯು), ಎರಡು ವರ್ಷದ ಒಳಗಿನ ಮಕ್ಕಳಿಗೆ ಬಿಸಿಜಿ, ಪೋಲಿಯೊ, ದಡಾರ ಮತ್ತು ರುಬೆಲ್ಲಾ ಪ್ರತ್ಯೇಕ ಲಸಿಕೆ ಹಾಗೂ ಡಿಪಿಟಿ, ಹೆಪಟೈಟಿಸ್-ಬಿ, ಇನ್‌ಪ್ಲ್ಯುಯೆಂಜಾಬಿ ಸೇರಿರುವ ಪೆಂಟಾವೆಲೆಂಟ್ 5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ್ ಒಳಗೊಂಡಂತೆ ಇಲಾಖೆಯಿಂದ ಸಿಗುವ ಸೇವಾ ಸೌಲಭ್ಯ ನೀಡಲಾಗುವುದು.

‘ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆ ಕೊಡಿಸುವುದು ಪೋಷಕರ ಕರ್ತವ್ಯ. ಪೋಷಕರು ತಪ್ಪದೇ ತೀವ್ರ ಇಂದ್ರ ಧನುಷ್‌ ಅಭಿಯಾನದಲ್ಲಿ ಭಾಗವಹಿಸಬೇಕು.

ಅಲೆಮಾರಿ ಜನರು, ಕಟ್ಟಡ ನಿರ್ಮಾಣ ಕಾರ್ಮಿಕರು, ಇನ್ನಿತರೆ ಲಸಿಕಾ ಕಾರ್ಯಕ್ರಮದಿಂದ ವಂಚಿತರಾದ, ಬಿಟ್ಟು ಹೋದದಂತಹ ಮಕ್ಕಳು, ಗರ್ಭಿಣಿಯರಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.