ADVERTISEMENT

ನಿಫಾ ವೈರಸ್ ಜನರಲ್ಲಿ ಆತಂಕ ಬೇಡ

ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 11:19 IST
Last Updated 27 ಮೇ 2018, 11:19 IST

ರಾಮನಗರ : ಜಿಲ್ಲೆಯಲ್ಲಿ ಇದುವರೆಗೂ ನಿಫಾ ವೈರಸ್‌ನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೂ, ಮುನ್ನೆಚ್ಚರಿಕೆ ಸಲುವಾಗಿ ಅಗತ್ಯ ಕ್ರಮ ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ತಿಳಿಸಿದರು.

ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಫಾ ವೈರಸ್ ಕುರಿತು ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೇರಳದಲ್ಲಿ ವರದಿಯಾಗುತ್ತಿರುವ ನಿಫಾ ವೈರಸ್ ಹಾವಳಿಯಿಂದಾಗಿ ಅಲ್ಲಿ ಹಲವರು ಪ್ರಾಣ ಕಳೆದು ಕೊಂಡಿದ್ದಾರೆ. ಪ್ರಮುಖವಾಗಿ ಬಾವಲಿಗಳಿಂದ ಹರಡುವ ಈ ರೋಗ ಜಿಲ್ಲೆಯಲ್ಲಿ ಬಾರದಂತೆ ಸಕಲ ರೀತಿಯ ಕ್ರಮ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳಬೇಕು. ಜತೆಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ರೋಗ ಬಾರದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ತುರ್ತಾಗಿ ಕೈಗೊಳ್ಳಬೇಕು ಎಂದರು.

ADVERTISEMENT

ಮಾಗಡಿ ತಾಲ್ಲೂಕಿನಲ್ಲಿ ಬೆಟ್ಟಗುಡ್ಡ ಪ್ರದೇಶಗಳಿದ್ದು, ಅಲ್ಲಿ ಬಾವಲಿಗಳು ವಾಸಿಸುವ ಬಗ್ಗೆ ಪತ್ತೆ ಹಚ್ಚಬೇಕು. ಈ ಪ್ರದೇಶದಲ್ಲಿ ಹಂದಿ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲೆಯ ಯಾವುದೇ ಪ್ರದೇಶದಲ್ಲೂ ನೀರಾ ಇಳಿಸುವುದು ಕಂಡು ಬಂದಿಲ್ಲ. ಜಿಲ್ಲೆಯಲ್ಲಿರುವ ಪ್ರವಾಸಿ ಸ್ಥಳಗಳಲ್ಲಿ ಪೋಸ್ಟರ್ ಹಾಗೂ ಬ್ಯಾನರ್‍ ಅಳವಡಿಸಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಿ ನಿಫಾ ವೈರಸ್ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆರೆಯಬೇಕು. ಅಗತ್ಯ ಔಷಧಿಗಳ ದಾಸ್ತಾನು ಇರಿಸಬೇಕು. ಈ  ಕಾಯಿಲೆ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪ್ರಸನ್ನಕುಮಾರ್ ಮಾತನಾಡಿ ನಿಫಾ ವೈರಸ್ ಒಂದು ವೈರಾಣು ಸೋಂಕಾಗಿದೆ. ಮೆದುಳನ್ನು ಘಾಸಿಗೊಳಿಸಿ ಜೀವಕ್ಕೆ ತುತ್ತು ತರುವ ಅಪಾಯಕಾರಿ ವೈರಸ್ ಇದು. ಜೀವ ಶಾಸ್ತ್ರೀಯವಾಗಿ ಹೆನಿಪಾ ವೈರಸ್ ಎಂದು ಕರೆಯಲ್ಪಡುವ ನಿಫಾ(ಎನ್.ಐ.ವಿ) ಮಾನವ ಹಾಗೂ ಪ್ರಾಣಿ ಇಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಈ ಜ್ವರ ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಬಾಧಿಸುತ್ತದೆ ಎಂದರು.

ಜ್ವರ, ತಲೆನೋವು, ವಾಂತಿ, ಆಯಾಸ, ಪ್ರಜ್ಞೆ ತಪ್ಪುವುದು, ಕೆಲವರಲ್ಲಿ ಮೂರ್ಛೆ ರೋಗ ಕಾಣಿಸಿಕೊಳ್ಳುವುದು ಇದರ ಲಕ್ಷಣವಾಗಿದೆ. ದೇಹದಲ್ಲಾಗುವ ಈ ಬದಲಾವಣೆ 10 ರಿಂದ 12 ದಿನವಿರುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 5 ಹಾಸಿಗೆಗಳ ಕೊಠಡಿ ಕಾಯ್ದಿರಿಸಲಾಗಿದೆ. ನಿಫಾ ವೈರಸ್‌ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕರಪತ್ರ ಹಂಚಲಾಗುತ್ತಿದೆ. ಈ ರೋಗಕ್ಕೆ ಸಂಬಂಧಪಟ್ಟ ಯಾವುದೇ ತರಹದ ರೋಗ ಲಕ್ಷಣಗಳು, ಸಂಶಾಸ್ಪದ ಪ್ರಕರಣಗಳು ಕಂಡು ಬಂದಲ್ಲಿ ತುರ್ತಾಗಿ ವೈದ್ಯರ ಗಮನಕ್ಕೆ ತರಬೇಕು. 104 ಕ್ಕೆ ಕರೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮುಲ್ಲೈ ಮುಹೀಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಪ್ರಶಾಂತ್, ಉಪ ವಿಭಾಗಾಧಿಕಾರಿ ನಾಗರಾಜ್, ಆರ್‌ಸಿಎಚ್ ಅಧಿಕಾರಿ ಡಾ.ಆರ್‌.ಎನ್.ಲಕ್ಷ್ಮೀಪತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ.ಶಿವರಾಜ್‌ ಇದ್ದರು.

ಸೋಂಕು ಹರಡುವ ವಿಧಾನ

ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲು ಸೇವಿಸುವುದರ ಮೂಲಕ, ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು, ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಹರಡುತ್ತದೆ, ಸೋಂಕಿತ ಮನ್ಯಷ್ಯನ ಮಲ ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ಸಂಪರ್ಕದಿಂದ ಆರೋಗ್ಯವಂತ ಮನುಷ್ಯರಿಗೆ ಹರಡುತ್ತದೆ ಎಂದು ಡಾ.ಪ್ರಸನ್ನಕುಮಾರ್ ತಿಳಿಸಿದರು.

ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣು ಸೇವಿಸಬಾರದು, ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ ಕುಡಿಯಬಾರದು, ತಾಜಾ ತಾಳೆ ಹಣ್ಣಿನ ರಸ ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರ ಇವುಗಳನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು ಎಂದರು.

ಅನಾರೋಗ್ಯದ ಹಂದಿ ಮತ್ತು ಪ್ರಾಣಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು, ಬಾವಲಿಗಳ ಪ್ರವೇಶ ತಪ್ಪಿಸಲು, ತೆರದ ಬಾವಿಗಳಿಗೆ ಜಾಲರಿ ಅಳವಡಿಸುವುದು, ಕೈಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸುವುದು ತಡೆಗಟ್ಟುವಿಕೆಯ ಬಹುಮುಖ್ಯ ಕ್ರಮವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.