ADVERTISEMENT

ನೀರಿನ ಪ್ರತಿಯೊಂದು ಹನಿಯೂ ಅಮೃತ ಸಮಾನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:47 IST
Last Updated 23 ಮಾರ್ಚ್ 2017, 6:47 IST

ಮಾಗಡಿ: ಹನಿ ಹನಿ ನೀರು ಸಹ ಅಮೃತ ಸಮಾನವಾಗಿದೆ, ನೀರು ಪೋಲಾಗದಂತೆ ಎಚ್ಚರಿಕೆವಹಿಸುವುದರ ಜೊತೆಗೆ ಮಳೆಯ ನೀರನ್ನು ಹರಿದು ಹೋಗದಂತೆ ತಡೆಹಿಡಿದು ಭೂಮಿಯಲ್ಲಿ ಇಂಗಿಸಬೇಕಿದೆ ಎಂದು ಹಿರಿಯ ಲೇಖಕ ಡಿ.ಆರ್‌.ಚಂದ್ರಮಾಗಡಿ ತಿಳಿಸಿದರು.

ಹೊಂಬಾಳಮ್ಮನಪೇಟೆಯಲ್ಲಿ ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಧಾನ್ ಫೌಂಡೇಶನ್ ಸಹಯೋಗದಲ್ಲಿ ಬುಧವಾರ ನಡೆದ ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿದರು.

ಮಾಗಡಿ ತಾಲ್ಲೂಕಿನಲ್ಲಿ ಚೋಳರ ಕಾಲದ 175 ಕೆರೆಗಳು, ನೂರಾರು ಕಲ್ಯಾಣಿಗಳಿದ್ದವು. ಇಂದು ಭೂದಾಹಿಗಳ ಒತ್ತುವರಿಗೆ ಸಿಲುಕಿ ಕೆರೆಗಳು ಕಣ್ಮರೆಯಾಗುತ್ತಿವೆ, ಕಲ್ಯಾಣಿಗಳೆಲ್ಲವೂ ಕಬಳಿಕೆಯಾಗಿವೆ, ಕಾಡನ್ನು ಅಕ್ರಮವಾಗಿ ಕಡಿದು ಭೂಮಿ ಮಾಡಿಕೊಂಡು ರೆಸಾರ್ಟ್‌ ಮಾಡುತ್ತಿರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ, ಮುಂದಿನ ಪೀಳಿಗೆ ಹನಿ ಹನಿ ನೀರಿಗೆ ಯುದ್ಧ ಮಾಡುವ ಸ್ಥಿತಿ ಒದಗಬಹುದು ಎಂದು ತಿಳಿಸಿದರು.

ವಿಜ್ಞಾನಿ ಡಾ. ಕಮಲಾ ಬಾಯಿ ಮಾತನಾಡಿ ಸಮಗ್ರ ಕೃಷಿ ಪದ್ಧತಿಯಲ್ಲಿ ನೀರಿನ ಸದ್ಬಳಕೆ ಮತ್ತು ಅಲ್ಪ ನೀರನ್ನು ಬಳಸಿ ಬರನಿರೋಧಕ ಬೆಳೆಗಳಾದ ಕಿರು ಧಾನ್ಯಗಳು, ಮೇವಿನ ಮರಗಳು ಹಾಗೂ ಮಣ್ಣು ರಹಿತ ಹಸಿರು ತಾಜಾ ಮೇವು ಉತ್ಪಾದನೆಯ ಬಗ್ಗೆ ತಿಳಿಸಿದರು.

ವಿಜ್ಞಾನಿ ಡಾ. ಹನುಮಂತರಾಯ ಮಾತನಾಡಿ ತೋಟಗಾರಿಕೆ ಬೆಳೆಗಳಲ್ಲಿ ಸಮರ್ಪಕ ನೀರಿನ ಸದ್ಬಳಕೆಯ ವಿಧಾನಗಳ ಬಗ್ಗೆ ಭಾಗವಹಿಸಿದ ರೈತರಿಗೆ ವಿವರಿಸಿದರು.  ವಿಜ್ಞಾನಿ  ಸೈಯದ್ ಮಜರ್ ಆಲಿ ಮಾತನಾಡಿ ಮಳೆ ನೀರು ಕೊಯ್ಲು ಮತ್ತು ಇಳಿಜಾರು ಪ್ರದೇಶಗಳಲ್ಲಿ ಮಣ್ಣು ಹಾಗೂ ನೀರು ಸಂರಕ್ಷಣೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ತಿಳಿಸಿದರು.

ಧಾನ್‌ ಫೌಂಡೇಷನ್‌ನ ಶಂಕರ್‌ ಪ್ರಸಾದ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಎಲ್‌ಐಸಿ ಬೀರೇಶ್‌,  ಧಾನ್ ಫೌಂಡೇಷನ್‌ನ ನಾಗರತ್ನ, ಕಳಂಜಿ ವಲಯಗಂ ತರಕಾರಿ ಸಂಘದ ಭಾಗ್ಯಮ್ಮ ಕೃಷ್ಣಪ್ಪ, ಗಂಗಮ್ಮ ಮರಿಗಂಗಯ್ಯ, ಅಮ್ಮಯ್ಯತಿಮ್ಮಯ್ಯ, ಲಕ್ಷ್ಮಮ್ಮಪಾಪಣ್ಣ, ವರಲಕ್ಷ್ಮೀ ಶಿವಣ್ಣ, ನೇತ್ರಾವತಿ ಭೀಮಯ್ಯ, ಗೌರಮ್ಮ, ಗಂಗನರಸಿಂಹಯ್ಯ,  ಎಸ್.ಬಿ.ಐ. ಬ್ಯಾಂಕಿನ ಮ್ಯಾನೇಜರ್ ಜಯಂತಿ ಸಂಪತ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT