ADVERTISEMENT

ನೊಣಗಳ ಹಾವಳಿ: ಗ್ರಾಮಸ್ಥರ ನರಕಯಾತನೆ

ಕೀರಣಗೆರೆ ಕೋಳಿ ಫಾರಂ ಮುಚ್ಚಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಬರಡನಹಳ್ಳಿ ಕೃಷ್ಣಮೂರ್ತಿ
Published 26 ಜುಲೈ 2016, 9:47 IST
Last Updated 26 ಜುಲೈ 2016, 9:47 IST
ಕನಕಪುರ ತಾಲ್ಲೂಕಿನ ಕೀರಣಗೆರೆ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಐಶ್ವರ್ಯ ಕೋಳಿ ಫಾರಂನ ತಳಭಾಗದಲ್ಲಿ ಬಿದ್ದಿರುವ ಕೋಳಿ ಇಕ್ಕೆಯು ಕೊಳೆತು ಹುಳು ಬಿದ್ದು ಗಬ್ಬುನಾರುತ್ತಿರುವುದು
ಕನಕಪುರ ತಾಲ್ಲೂಕಿನ ಕೀರಣಗೆರೆ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಐಶ್ವರ್ಯ ಕೋಳಿ ಫಾರಂನ ತಳಭಾಗದಲ್ಲಿ ಬಿದ್ದಿರುವ ಕೋಳಿ ಇಕ್ಕೆಯು ಕೊಳೆತು ಹುಳು ಬಿದ್ದು ಗಬ್ಬುನಾರುತ್ತಿರುವುದು   

ಕನಕಪುರ: ನೊಣಗಳ ಸಮಸ್ಯೆಯಿಂದ ರೋಸಿ ಹೋಗಿರುವ ಗ್ರಾಮದ ಜನತೆ ಮುತ್ತಿಗೆ ಹಾಕಿ ಕೋಳಿ ಫಾರಂನ್ನು ಮುಚ್ಚುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಕೀರಣಗೆರೆ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆಯಿತು.

ಕೀರಣಗೆರೆ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಐಶ್ವರ್ಯ ಕೋಳಿ ಫಾರಂನಲ್ಲಿ ನೊಣಗಳು ದೊಡ್ಡ ಮಟ್ಟದಲ್ಲಿ ಉತ್ಪತ್ತಿಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಮತ್ತು  ಪ್ರತಿಭಟನೆಗೆ ಕಾರಣವಾಗಿದೆ. ಕಳೆದ 3 ವರ್ಷಗಳ ಹಿಂದೆ ಐಶ್ವರ್ಯ ಕೋಳಿ ಫಾರಂನ್ನು ವಹಿಸಿಕೊಂಡು ಮೊಟ್ಟೆ ಕೋಳಿಗಳನ್ನು ಸಾಕಲು ಪ್ರಾರಂಭಿಸಿದ ದಿನದಿಂದ ನೊಣಗಳ ಸಮಸ್ಯೆ ಶುರುವಾಯಿತು.

ನೊಣಗಳ ಸಮಸ್ಯೆಯೆಂದರೆ ಒಬ್ಬಿಬ್ಬರ ಸಮಸ್ಯೆಯಲ್ಲ, ಇಡೀ ಗ್ರಾಮದಲ್ಲೇ ಇಂತಹ ಸಮಸ್ಯೆ ತಲೆದೋರಿದೆ. ಕುಳಿತರೆ ನೊಣ, ಊಟ ಮಾಡಲು ಹೋದರೆ ನೊಣ, ಮನೆಯಲ್ಲಿನ ಪಾತ್ರೆಗಳ ಮೇಲೆ ನೊಣಗಳು ಕುಳಿತು ಅಂಟು ಅಂಟಾಗಿವೆ, ಕಿಟಕಿ ಗಾಜುಗಳು, ಗೋಡೆಗಳು ನೊಣಗಳ ಅಂಟಿನಿಂದ ಗಲೀಜಾಗಿ ಕೈಯಿಂದ ಮುಟ್ಟಲಾಗದಂತೆ ಆಗಿದೆ ಎನ್ನುತ್ತಾರೆ ಕಮಲಮ್ಮ.

ಗ್ರಾಮದಲ್ಲಿ ಹಬ್ಬ ಮಾಡಿದರೆ, ಯಾರದರು ಸತ್ತರೆ ಜನ ಊಟ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಇಡೀ ಗ್ರಾಮದ ಎಲ್ಲರ ಮನೆಯಲ್ಲೂ ನೊಣಗಳ ಹಾವಳಿಯಿಂದ ಜನ ನೆಮ್ಮದಿಯನ್ನು ಕಳೆದುಕೊಂಡು ನಿದ್ದೆ ಮಾಡದಂತಾಗಿದೆ. ರೇಷ್ಮೆ ಸಾಕಾಣಿಕೆ, ಹೈನುಗಾರಿಕೆ ಮತ್ತು ಮನುಷ್ಯರ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಗ್ರಾಮದ ಯಶೋದಮ್ಮ, ಚಂದ್ರಮ್ಮ.

ಕಳೆದ ಮೂರು ವರ್ಷಗಳಿಂದ ನರಕ ಯಾತನೆ ಅನುಭವಿಸುತ್ತಿದ್ದು ಗ್ರಾಮವೇ ಬೇಡವೆಂಬ ಸ್ಥಿತಿ ನಿರ್ಮಾಣವಾಗಿದೆ, ಇದು ಕೇವಲ ಕೀರಣಗೆರೆ ಗ್ರಾಮ ಒಂದರ ಸಮಸ್ಯೆಯಲ್ಲ, ಚಿಕ್ಕದೇವರಹಳ್ಳಿ, ದೇವರಕಗ್ಗಲಹಳ್ಳಿ, ಮರೀಗೌಡನದೊಡ್ಡಿ, ರಸ್ತೆಜಕ್ಕಸಂದ್ರ, ನರಸಿಂಹಯ್ಯನದೊಡ್ಡಿ, ಟಿ.ಹೊಸಳ್ಳಿ, ಸಂಜೀವಯನದೊಡ್ಡಿ ಸೇರಿದಂತೆ 10 ಗ್ರಾಮಗಳಲ್ಲಿ ನೊಣಗಳ ಸಮಸ್ಯೆ ತಲೆದೋರಿದೆ ಎನ್ನುತ್ತಾರೆ ಗ್ರಾಮದ ರಾಜು, ಪ್ರಕಾಶ್‌.

ಅಂಗನವಾಡಿಯಲ್ಲೂ ನೊಣಗಳ ಸಮಸ್ಯೆಯಿಂದ ಮಕ್ಕಳಿಗೆ ಊಟ ಕೊಡಲು ಆಗುತ್ತಿಲ್ಲ, ಕಿಟಕಿ, ಬಾಗಿಲು ಹಾಕಿಕೊಂಡೇ ಅಂಗನವಾಡಿಯಲ್ಲಿ ಕಾಲ ಕಳೆಯಬೇಕಿದೆ, ನೊಣಗಳ ಸಮಸ್ಯೆ ಸರಿಪಡಿಸಲು ನಾಲ್ಕೈದು ಬಾರಿ ಗ್ರಾಮದ ಮುಖಂಡರು ಕೋಳಿ ಫಾರಂ ಮಾಲಿಕರ ಜತೆ ಮಾತುಕತೆ ನಡೆಸಿದ್ದಾರೆ ಏನು ಪ್ರಯೋಜನವಾಗಿಲ್ಲ, ನೊಣಗಳ ಸಮಸ್ಯೆ ಪರಿವಾರ ಆದರೆ ಸಾಕು ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ನಾಗವೇಣಿ.  

ನೊಣಗಳ ಸಮಸ್ಯೆ ಹೆಚ್ದಾಗಿದ್ದರಿಂದ ಗ್ರಾಮಸ್ಥರೆಲ್ಲಾ ಕೋಳೀ ಫಾರಂ ಮುಚ್ಚಿಸಬೇಕು, ಅದಕ್ಕಾಗಿ ಹೋರಾಟ ನಡೆಸಲು ತೀರ್ಮಾನಿಸಿ ಶನಿವಾರ, ಭಾನುವಾರ ಸುತ್ತಮುತ್ತಲ 10 ಗ್ರಾಮಗಳಲ್ಲಿ ತಮಟೆ ಹೊಡೆಸಿ ಜನರಿಗೆ ವಿಷಯ ಮುಟ್ಟಿಸಿ ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದೆವು, ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಸೋಮವಾರ ಬೆಳಿಗ್ಗೆ ಫಾರಂ ಮುಂದೆ ಪ್ರತಿಭಟನೆ ನಡೆಸಿದ್ದೇವೆ.

ಕೋಳಿ ಫಾರಂ ಮಾಲಿಕರು ಹಾರೋಹಳ್ಳಿ ಪೊಲೀಸರಿಗೆ ಮುಂಜಾಗೃತ ಕ್ರಮವಾಗಿ ವಿಷಯ ಮುಟ್ಟಿಸಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆ ತಡೆದು ಬುಧವಾರದ ವರೆಗೆ ಕಾಲವಕಾಶ ಕೇಳಿದ್ದಾರೆ.

ಮಾಲೀಕರೊಂದಿಗೆ ಮಾತುಕತೆ ನಡೆಸಿ ನೊಣ ಸಮಸ್ಯೆಗೆ ಪರಿಹಾರ ಒದಗಿಸುವ, ಇಲ್ಲವೇ ಫಾರಂ ನಿಲ್ಲಿಸುವ ಭರವಸೆ ಕೊಟ್ಟಿದ್ದಾರೆ. ಬುಧವಾರದವರೆಗೆ ನೋಡಿಕೊಂಡು ಮುಂದಿನ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. 

15 ವರ್ಷಗಳಿಂದ ಕೋಳಿ ಫಾರಂ ನಡೆಯುತ್ತಿತ್ತು, ಆಗ ಏನು ಸಮಸ್ಯೆ ಇರಲಿಲ್ಲ. 3ವರ್ಷಗಳ ಹಿಂದೆ ಕೃಷ್ಣಮೂರ್ತಿ ಎಂಬುವರು ವಹಿಸಿ ಕೊಂಡ ಮೇಲೆ ನೊಣಗಳ ಸಮಸ್ಯೆ ಜಾಸ್ತಿಯಾಗಿದೆ.

ಹೊಸ ವಿಧಾನದಲ್ಲಿ ಕೋಳಿ ಹಿಕ್ಕೆಯು ನೀರಾಗಿ ಬೀಳುವುದರಿಂದ ಕೆಳಭಾಗದಲ್ಲಿ ಕೊಳೆತು ಹುಳುಬಿದ್ದು ನೊಣ ಹೆಚ್ಚುತ್ತಿದೆ, ನೊಣ ನಿಯಂತ್ರಿಸಲು ಸಿಂಪಡಿಸಿದ ಔಷಧಿಯಿಂದ ರೇಷ್ಮೆಹುಳು ನಾಶವಾಗಿ 3 ರೈತರಿಗೆ ದಂಡ ಕಟ್ಟಿದ್ದಾರೆ.

ಸಮಸ್ಯೆ ನಿವಾರಣೆ ಮಾಡುವಂತೆ ಸಚಿವರು, ಸಂಸದರು, ತಹಸೀಲ್ದಾರ್‌, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ದೂರು ಕೊಡಲಾಗಿದೆ. ಕೋಳಿ ಫಾರಂ ನಡೆಸುವುದು ಬೇಡವೆಂದು ಯಾರು ಹೇಳುವುದಿಲ್ಲ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಂಪೂರ್ಣವಾಗಿ ನೊಣಗಳನ್ನು ನಿಯಂತ್ರಿಸಿ ನಡೆಸಬೇಕು, ಇಲ್ಲವೇ ಕೋಳಿ ಫಾರಂನ್ನು ಅನಿವಾರ್ಯವಾಗಿ ಮುಚ್ಚಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಹೊಂಬಾಳೇಗೌಡ ಅವರು ಒತ್ತಾಯಿಸುತ್ತಾರೆ.

ಒಂದು ವೇಳೆ ಯಶಸ್ವಿಯಾಗದಿದ್ದಲ್ಲಿ ಗ್ರಾಮಸ್ಥರ ವಿರೋಧ ಕಟ್ಟಿಕೊಂಡು ಫಾರಂ ನಡೆಸುವುದಿಲ್ಲ. ಇರುವ ಬ್ಯಾಚ್‌ ಮುಗಿಸಿ ಫಾರಂ ನಿಲ್ಲಿಸಲಾಗುವುದು ಎಂದು  ಐಶ್ವರ್ಯ ಕೋಳಿಫಾರಂ ಮಾಲೀಕರಾದ ತ್ರಿನಾಥ್‌ರೆಡ್ಡಿ ಕೃಷ್ಣಮೂರ್ತಿ ಹೇಳುತ್ತಾರೆ. 

***
ಬೆಂಗಳೂರು ಬಿ.ಬಿ.ಎಂ.ಪಿ ನೊಣಗಳ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಿ ಈಗಾಗಲೇ ಯಶಸ್ವಿಯಾಗಿದೆ. ಅವರ ಮಾರ್ಗದರ್ಶನದಲ್ಲಿ ನೊಣಗಳ ನಿಯಂತ್ರಣಕ್ಕೆ ಪ್ರಯತ್ನಿಸಲಾಗುವುದು.
-ತ್ರಿನಾಥ್‌ರೆಡ್ಡಿ ಕೃಷ್ಣಮೂರ್ತಿ, ಐಶ್ವರ್ಯ ಕೋಳಿಫಾರಂ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.