ADVERTISEMENT

ಪಂಚಾಯಿತಿ ಉಪಾಧ್ಯಕ್ಷೆಯಿಂದ ಮೂರನೇ ಬಾರಿ ಧರಣಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 7:08 IST
Last Updated 1 ಮಾರ್ಚ್ 2017, 7:08 IST

ಚನ್ನಪಟ್ಟಣ: ತಾಲ್ಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ಪಿಡಿಒ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಈ ಹಿಂದೆ ಎರಡು ಬಾರಿ ಧರಣಿ ನಡೆಸಿದ್ದ ಪಂಚಾಯಿತಿ ಉಪಾಧ್ಯಕ್ಷೆ ವರಲಕ್ಷ್ಮಿ ಮಂಗಳವಾರ ಗ್ರಾ.ಪಂ. ಕಚೇರಿ ಎದುರು ಮೂರನೇ ಬಾರಿಗೆ ಧರಣಿ ಆರಂಭಿಸಿದ್ದಾರೆ.

ಅಧಿಕಾರಿಗಳು ನೀಡಿದ್ದ ಭರವಸೆ ಈವರೆಗೆ ಈಡೇರದ ಕಾರಣ ಜನವಾದಿ ಮಹಿಳಾ ಸಂಘಟನೆಯ ಸಹಕಾರ ಪಡೆದು ಬೆಳಿಗ್ಗೆಯಿಂದಲೇ ಧರಣಿ ಆರಂಭಿಸಿದ್ದಾರೆ.

ಒಮ್ಮೆ ಪಂಚಾಯಿತಿ ಕಚೇರಿಯೊಳಗೆ ಏಕಾಂಗಿಯಾಗಿ ಕುಳಿತು ಒಂದು ದಿನ ರಾತ್ರಿಯಿಡೀ ಧರಣಿ ನಡೆಸಿದ್ದ ವರಲಕ್ಷ್ಮಿ, ಅಧಿಕಾರಿಗಳ ಭರವಸೆ ಮೇರೆಗೆ ವಾಪಸ್ ಪಡೆದಿದ್ದರು. ನಂತರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಮತ್ತೆ ಮಹಿಳಾ ಸಂಘಟನೆಯೊಂದಿಗೆ ಪ್ರತಿಭಟನೆ ನಡೆಸಿದ್ದರು. ಆಗಲೂ ಅಧಿಕಾರಿಗಳ ಭರವಸೆ ಮೇಲೆ ವಾಪಸ್ ಪಡೆದಿದ್ದರು. ಈವರಗೆ ಭರವಸೆ ಈಡೇರದ ಕಾರಣ ಮಂಗಳವಾರ ಮತ್ತೆ ಧರಣಿ ಆರಂಭಿಸಿದ್ದಾರೆ.

‘ಇಲ್ಲಿನ ಪಿಡಿಒ ಈಗಲೂ ಜನಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನರೇಗಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದೆ. ಆದರೂ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ಈ ಹಿಂದೆ ಎರಡು ಬಾರಿ ಪ್ರತಿಭಟನೆ ಮಾಡಿದಾಗ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ. ಹಾಗಾಗಿ ಮೂರನೇ ಬಾರಿಗೆ ಪ್ರತಿಭಟನೆ ಮಾಡುತ್ತಿದ್ದೇನೆ. ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ನಿಲ್ಲಿಸುವುದಿಲ್ಲ’ ಎಂದು ವರಲಕ್ಷ್ಮಿ ತಿಳಿಸಿದರು.

‘ಅಧಿಕಾರಿಗಳು ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಮಾತಿನಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿಲ್ಲ. ಭ್ರಷ್ಟಾಚಾರಕ್ಕೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ. ಅಧಿಕಾರಿಗಳು ಇಲ್ಲಿಗೆ ಬಂದು ಕ್ರಮ ಕೈಗೊಳ್ಳುವವರೆಗೆ ಧರಣಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ರಾತ್ರಿಪೂರಾ ಧರಣಿ ಮುಂದುವರೆಯುತ್ತದೆ’ ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಅನುಪಮ ನಾಗವಾರ, ಕಾರ್ಯದರ್ಶಿ ಪ್ರಮೀಳಾ, ಪದಾಧಿಕಾರಿಗಳಾದ ಜಯಮ್ಮ, ಜಯಲಕ್ಷ್ಮಮ್ಮ, ಗಂಗಮ್ಮ, ಚಂದ್ರಮ್ಮ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.