ADVERTISEMENT

ಪರಿಶೀಲನೆ ನಡೆಸಿ ವರದಿ: ಸಿಇಒಗೆ ಪತ್ರ

ಶುದ್ಧ ನೀರಿನ ಘಟಕದ ಕಾಮಗಾರಿ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:47 IST
Last Updated 24 ಮಾರ್ಚ್ 2017, 8:47 IST
ಚನ್ನಪಟ್ಟಣ ತಾಲ್ಲೂಕಿನ ಮುದಗೆರೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ
ಚನ್ನಪಟ್ಟಣ ತಾಲ್ಲೂಕಿನ ಮುದಗೆರೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ   

ಚನ್ನಪಟ್ಟಣ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ತಾಲ್ಲೂಕಿನ ಕೋಲೂರು, ಮುದಗೆರೆ ಹಾಗೂ ಪಟ್ಟಣ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ 2013-14 ಮತ್ತು 2014-15 ನೇ ಸಾಲಿನಲ್ಲಿ ಶಾಸಕ ಯೋಗೇಶ್ವರ್ ಅವರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಮಾಡಲಾಗಿದ್ದು, ಅವು ಕಳಪೆ ಗುಣಮಟ್ಟದಿಂದ ಕೂಡಿವೆ. ಇದರ ತನಿಖೆ ನಡೆಸಬೇಕು ಎಂದು ತಾ.ಪಂ. ಮಾಜಿ ಸದಸ್ಯ ಹನುಮಂತಯ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಪತ್ರ ಬರೆದಿದ್ದಾರೆ.

2013-14ನೇ ಸಾಲಿನಲ್ಲಿ ಕುಡಿಯುವ ನೀರಿನ ಘಟಕಗಳಿಗಾಗಿ ತಲಾ ₹2 ಲಕ್ಷ ಅನುದಾನ ನೀಡಲಾಗಿದೆ. ಹಾಗೆಯೆ 2014-15ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅದೇ ಕಾಮಗಾರಿಗಳಿಗೆ ಮತ್ತೆ ತಲಾ ₹ 5 ಲಕ್ಷ ಗಳನ್ನು ನೀಡಲಾಗಿದೆ. ಆದರೂ ಕಾಮಗಾರಿಗಳು ಮುಕ್ತಾಯಗೊಂಡಿಲ್ಲ ಎಂದರು.

ಹನುಮಂತಯ್ಯ ಅವರ ದೂರಿನ ಮೇರೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್ ಅವರು, ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಪತ್ರ ಬರೆದು ಕಾಮಗಾರಿ ಪರಿಶೀಲಿಸಿ, ಈ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.