ADVERTISEMENT

ಪಾಳು ಬಿದ್ದ ಮನೆಯಲ್ಲಿ ತಾಯಿ, ಮಗಳ ವಾಸ

ಕೆಲಸ ಬಿಟ್ಟು ಬಂದ ಬಳಿಕ ಮನೆಯಲ್ಲೇ ಉಳಿದ ಮಗಳು

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 10:16 IST
Last Updated 24 ಜನವರಿ 2017, 10:16 IST
ಪಾಳು ಬಿದ್ದ ಮನೆಯಲ್ಲಿ ತಾಯಿ, ಮಗಳ ವಾಸ
ಪಾಳು ಬಿದ್ದ ಮನೆಯಲ್ಲಿ ತಾಯಿ, ಮಗಳ ವಾಸ   

ಮಾಗಡಿ: ಬಡತನದಿಂದ 10 ವರ್ಷಗಳಿಂದ ಪಾಳು ಮನೆಯಲ್ಲೇ ಬದುಕುತ್ತಿರುವ, 5 ವರ್ಷದಿಂದ ಮನೆಯಿಂದ ಹೊರಗೆ ಬಾರದ  ತಾಯಿ ಮಗಳ ಸ್ಥಿತಿ ಕಂಡರೆ ಕರುಳು ಕಿತ್ತು ಬರುವಂತಿದೆ.

ದನದ ಕೊಟ್ಟಿಗೆಯಾದರೂ ಗಾಳಿ ಬೆಳಕಿನಿಂದ ಚೆನ್ನಾಗಿರುತ್ತದೆ. ಆದರೆ ತಾಯಿ ಮಗಳು ಸಂಸಾರ ಮಾಡುತ್ತಿರುವ ಈ ಮನೆಯಲ್ಲಿ ಮಳೆ ಬಂದರೆ ನೆನೆಯುವ ಸ್ಥಿತಿ ಇದೆ.ತಾಲ್ಲೂಕಿನ ಕೋಂಡಹಳ್ಳಿ ಗ್ರಾಮದಲ್ಲಿ ವೆಂಕಟಲಕ್ಷ್ಮಮ್ಮ ಮತ್ತು ಮಂಜುಳಾ, ತೂತು ಬಿದ್ದಿರುವ ಚಾವಣಿ ಮನೆಯಲ್ಲಿ ಜೀವಿಸುತ್ತಿದ್ದಾರೆ. ಮನೆಯೂ ಭಾಗಶಃ ಬಿದ್ದಿದೆ.

ಮಂಜುಳಾ (30) 5 ವರ್ಷಗಳಿಂದ ಗ್ರಾಮಸ್ಥರಿಗೆ ಅಂಜಿ ಮನೆಯಿಂದ ಹೊರಗೆ ಬರುತ್ತಿಲ್ಲ. ಮಂಜುಳಾ, 10ನೇ ತರಗತಿಯವರೆಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು ವಿದ್ಯಾರಣ್ಯಪುರದ ವಿದ್ಯಾರ್ಥಿ ನಿಲಯದಲ್ಲಿ ಅರೆಕಾಲಿಕ ಕೆಲಸದಲ್ಲಿದ್ದರು. ಮನೆಯಿಂದ ಹೊರಗೆ ಬಂದರೆ ಗ್ರಾಮಸ್ಥರು ಏನಾದರೂ ಹೇಳಿಯಾರೆಂಬ ಭಾವನೆ ಇದ್ದಂತಿದೆ.

ಮಗಳನ್ನು ಬೇರೆ ಕಡೆಗೆ ಕಳುಹಿಸಲು ತಾಯಿಗೆ ಇಷ್ಟವಿಲ್ಲ. ಗ್ರಾಮ ಪಂಚಾಯಿತಿಯವರು ಬಂದರೆ ಮಗಳನ್ನು ಬೇರೆ ಕಡೆ ಕಳುಹಿಸುತ್ತಾರೆಂದು ಅಧಿಕಾರಿಗಳು ಬಂದರೆ ಮನೆ ಹತ್ತಿರ ಬಿಡುತ್ತಿಲ್ಲ.

ಶೋಚನೀಯ ಸ್ಥಿತಿ: ಈ ಮನೆಗೆ ವಿದ್ಯುತ್ ಸಂಪರ್ಕ ಹಾಗೂ ಶೌಚಾಲಯ ಇಲ್ಲ. ಚಾವಣಿಗೆ ಪ್ಲಾಸ್ಟಿಕ್‌ ಟಾರ್ಪಲ್ ಹಾಕಿಕೊಂಡಿದ್ದಾರೆ. ಟಾರ್ಪಲ್ ಮೇಲೆ ಕಲ್ಲುಗಳನ್ನು ಇಟ್ಟಿದ್ದಾರೆ. ಮಳೆ ಬಂದರೆ ಸೋರುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ತಾಯಿಯ ಮನವೊಲಿಸಿ ಮಗಳನ್ನು ಒಳ್ಳೆಯ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಬೇಕು, ಇಲ್ಲವಾದರೆ ಕತ್ತಲೆಯಲ್ಲೇ ಜೀವನ ಸಾಗಿಸುವಂತೆ ಆಗುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ವೆಂಕಟಲಕ್ಷ್ಮಮ್ಮರ ಪತಿ ವೆಂಕಟೇಶಪ್ಪ ಹಾಗೂ ಮಗ ಗಿರೀಶ್ ಬೆಂಗಳೂರಿನಲ್ಲಿದ್ದರೂ ಮನೆ ಹತ್ತಿರ ಬರುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೇಟಿ
ಸಾತನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಂಗರಾಜು ಅವರು ಭಾನುವಾರ  ವೆಂಕಟಲಕ್ಷ್ಮಮ್ಮ ಮನೆಗೆ ಭೇಟಿ ನೀಡಿದರು. ‘ಪಂಚಾಯಿತಿಯಿಂದ ಮನೆ ಮಂಜೂರುಮಾಡಿಸುತ್ತೇನೆ, ಕೂಡಲೇ ಮನೆ ಕಟ್ಟಿಸಿಕೊಳ್ಳಿ. ಮಗಳನ್ನು ಕೆಲಸಕ್ಕೆ ಕಳುಹಿಸಿ ಮದುವೆ ಆಗುವ ರೀತಿ ಮಾಡಿ’ ಎಂದು ವೆಂಕಟಲಕ್ಷ್ಮಮ್ಮ ಅವರಲ್ಲಿ ಮನವಿ ಮಾಡಿದರು.

ಯಾವುದೇ ಕಾರಣಕ್ಕೂ ಮಗಳನ್ನು ಬೇರೆಕಡೆ ಹೋಗಲು ಬಿಡುವುದಿಲ್ಲ ಎಂದು ಆಕೆ ಅಧ್ಯಕ್ಷರ ವಿರುದ್ಧವೇ ತಿರುಗಿ ಬಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಅನುಕೂಲ ಮಾಡಿಕೊಡಬೇಕಿದೆ ಎಂದು ಗಂಗರಾಜು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT