ADVERTISEMENT

ಪಿಡಿಒ ವಿರುದ್ಧ ಕ್ರಮ: ಯೋಗೇಶ್ವರ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 11:23 IST
Last Updated 1 ನವೆಂಬರ್ 2014, 11:23 IST

ಚನ್ನಪಟ್ಟಣ: ಗ್ರಾಮ ಪಂಚಾಯಿತಿ­ಯಲ್ಲಿ ನಡೆಯುತ್ತಿರುವ ಅವ್ಯವಹಾರ­ಗಳಿಗೆ ಕಡಿವಾಣ ಹಾಕದಿದ್ದಲ್ಲಿ ಪಂಚಾ­ಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗು­ವುದು ಎಂದು ಶಾಸಕ ಸಿ.ಪಿ.ಯೋಗೇ­ಶ್ವರ್ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದ ಯೋಗೇಶ್ವರ್, ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ಮಿತಿಮೀರಿರುವ ಸುದ್ದಿಗಳು ಬರುತ್ತಿವೆ. ಇದನ್ನು ಕೇಳಿಕೊಂಡು ಸುಮ್ಮನೆ ಕೂರು­ವುದಿಲ್ಲ. ಪಿಡಿಒಗಳು ಅವ್ಯವಹಾರ ನಡೆ­ಯದಂತೆ ಎಚ್ಚರಿಕೆ ವಹಿಸದಿದ್ದರೆ ಮುಲಾ­ಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡು­­­ತ್ತಿದೆ. ಆದರೆ ಅದನ್ನು ಫಲಾ­ನುಭವಿಗೆ ತಲುಪಿಸುವಲ್ಲಿ ಗ್ರಾ.ಪಂ. ಆಡಳಿತ­ಯಂತ್ರ ವಿಫಲ­ಗೊಂಡಿ­­ರು­ವುದು ಸತ್ಯ. ಯಾರದೋ ಮುಲಾ­ಜಿಗೆ ಒಳಗಾಗಿ ಕಳ್ಳ ಬಿಲ್‌­ಗಳನ್ನು ಬಿಡು­ಗಡೆ ಮಾಡುವು­ದನ್ನು ಪಿಡಿಒಗಳು ಮೊದಲು ನಿಲ್ಲಿಸಬೇಕು. ದನದ ಕೊಟ್ಟಿಗೆ ನಿರ್ಮಾಣ, ಸಾಮೂ­ಹಿಕ ಕಣ ನಿರ್ಮಾಣ ಸೇರಿದಂತೆ ಜನರಿಗೆ ಉಪ­ಯೋಗವಾಗುವ ಕಾಮಗಾ­ರಿ­ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀ­ಣಾ­ಭಿವೃದ್ಧಿ ಮಾಡಲು ಪ್ರಮಾ­ಣಿಕವಾಗಿ  ಪ್ರಯ­­ತ್ನಿಸಬೇಕು ಎಂದು ತಾಕೀತು ಮಾಡಿದರು.

ಅವ್ಯವಹಾರ ನಡೆಸಿರುವ ಆರೋ­ಪಗ­ಳಿರುವ ತಾಲ್ಲೂಕಿನ ಕೆಲವು ಎಂಜಿನಿ­ಯರ್‌ಗಳ ವಿರುದ್ಧ ತನಿಖೆ ಆರಂಭ­ಗೊಂಡಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ. ಪಿಡಿಒಗಳು ಅಭಿವೃದ್ಧಿ ಮರೆತು ಅವ್ಯವ­ಹಾರದಲ್ಲೇ ಮುಂದುವರೆದರೆ ಅಂತ­ಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುವುದು ಖಚಿತ ಎಂದರು.ಮುಂದಿನ ದಿನಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಪಂಚಾಯಿತಿ ಅಭಿ­ವೃದ್ಧಿ ಅಧಿಕಾರಿಗಳ ಸಭೆ ಕರೆದು ಚರ್ಚಿ­ಸಲಾ­ಗುವುದು. ನಿಮ್ಮ ಸಾಧನೆ­ಯನ್ನು ನೀವು ವೀಡಿಯೋ ಸಮೇತ ಸಭೆಗೆ ವಿವರಿ­ಸಬೇಕು ಎಂದು ಯೋಗೇ­ಶ್ವರ್ ಪಿಡಿಒ­ಗಳಿಗೆ ಸೂಚಿಸಿದರು.  ತಾ.ಪಂ ಕಾರ್ಯನಿ­ರ್ವ­ಹಣಾಧಿಕಾರಿ ರೆಡ್ಡಪ್ಪ, ಪಿಡಿಒಗಳು, ಪಂಚಾ­ಯತ್ ರಾಜ್ ಇಲಾಖೆಯ ಸಿಬ್ಬಂದಿ ಇದ್ದರು.

ಕಿರೀಟ ಧಾರಣೆ ಮಹೋತ್ಸವ
ಮಾಗಡಿ: ತಾಲ್ಲೂಕಿನ ತಿಪ್ಪಸಂದ್ರ ಹೋಬ­ಳಿಯ ಸಂಕೀಘಟ್ಟ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 9.30ಕ್ಕೆ ವೇಣು­ಗೋಪಾಲ್‌ ಸ್ವಾಮಿ ದೇವರಿಗೆ  ಕಾರ್ತಿಕ ಮಹೋತ್ಸವ ಅಂಗವಾಗಿ  ನೂತನವಾಗಿ ಭಕ್ತರೊಬ್ಬರು ಮಾಡಿಸಿ ಕೊಟ್ಟಿರುವ ಬೆಳ್ಳಿ ಕಿರೀಟ ಧಾರಣೆ ಮಹೋತ್ಸವ ನಡೆಯಲಿದೆ ಎಂದು ಶ್ಯಾನುಭೋಗ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.

ದೇವರಿಗೆ ವಿಶೇಷ ಅಲಂಕಾರ ಮಾಡಲಾಗುವುದು. ವಿಶೇಷ ಹೋಮ ಹವನ ಪೂಜಾಧಿಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.