ADVERTISEMENT

ಪ್ರತಿಭಟನಾಕಾರರು, ಅಧಿಕಾರಿಗಳ ನಡುವೆ ವಾಗ್ವಾದ

ಇರುಳಿಗ ಸಮುದಾಯದ ಜನರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಅರೆಬೆತ್ತಲೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 7:53 IST
Last Updated 25 ಮೇ 2017, 7:53 IST

ರಾಮನಗರ: ಇರುಳಿಗರಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳು ಹಾಗೂ ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆಯು ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಯಿತು.

ಬೆಳಿಗ್ಗೆ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅರೆಬೆತ್ತಲೆಯಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಗೆ ಮುಂದಾದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡದ ಕಾರಣ ಮಾತಿನ ಚಕಮಕಿ ನಡೆಯಿತು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿ ಮೆರವಣಿಗೆಗೆ ಅವಕಾಶ ಕಲ್ಪಿಸಿಕೊಟ್ಟರು.

ಕಂದಾಯ ಭವನದ ಎದುರೇ ಪ್ರತಿಭಟನೆ ನಡೆಸುವಂತೆ ಪೊಲೀಸರು ತಾಕೀತು ಮಾಡಿದರು. ಆದರೆ ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು. ಆಗ, ಜಿಲ್ಲಾಧಿಕಾರಿ ಬಿ.ಆರ್. ಮಮತಾ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ರಮೇಶ್‌ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರು. ಕಡೆಗೆ ಕಂದಾಯ ಭವನ ಹಾಗೂ ಜಿ.ಪಂ. ಆವರಣದ ಸಮೀಪ ಪ್ರತಿಭಟನೆ ಮುಂದುವರಿಯಿತು.

‘ರಾಮದೇವರ ಬೆಟ್ಟದ ಇರುಳಿಗರ ಕಾಲೊನಿಯಲ್ಲಿ ಸುಮಾರು 80 ಕುಟುಂಬಗಳು ಹಲವಾರು ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ಜೋಪಡಿಯಲ್ಲಿ ಜೀವಿಸುತ್ತಿವೆ. ಇಲ್ಲಿ ಒಂದು ಕಡೆ ಅರಣ್ಯ ಇಲಾಖೆಯವರ ಕಿರುಕುಳವಾದರೆ, ಮತ್ತೊಂದು ಕಡೆ ನಕಲಿ ಭೂ ಮಾಲೀಕರ ಕಿರುಕುಳ ಹೆಚ್ಚಾಗಿದೆ. ಕೂಡಲೇ ಇಲ್ಲಿ ವಾಸಿಸುತ್ತಿರುವ ಇರುಳಿಗರ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಹೋರಾತ್ರಿ ಧರಣಿ: ಇರುಳಿಗ ಸಮುದಾಯದ ಜನರಿಗೆ ಹಕ್ಕುಪತ್ರಕ್ಕಾಗಿ ಬುಧವಾರ ಆರಂಭವಾದ ಪ್ರತಿಭಟನೆ ರಾತ್ರಿಯೂ ಮುಂದುವರಿಯಿತು.
ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟನಾಕಾರರು ವಾಸ್ತವ್ಯ ಹೂಡಿದ್ದು, ಅಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು.

ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ದಲಿತ ಸಂಘರ್ಷ ಸಮಿತಿಯ ಗೋವಿಂದರಾಜು, ಮುಖಂಡರಾದ ಶಿವು, ಸಿರಿಮನೆ ನಾಗರಾಜ್, ಮಹದೇವಯ್ಯ, ಕೃಷ್ಣ ಇತರರು ನೇತೃತ್ವ ವಹಿಸಿದ್ದರು.

310 ಅರ್ಜಿಗಳು ಮಾತ್ರ ವಿತರಣೆ
‘ಅರಣ್ಯವಾಸಿಗಳ ಹಕ್ಕು ಕಾಯ್ದೆಯ ಅಡಿ ಜಿಲ್ಲೆಯಲ್ಲಿ ಈವರೆಗೆ ಕೆಲವು ಹಳ್ಳಿಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. ಅರ್ಜಿದಾರರು ನೀಡಿರುವ ಭೂಮಿಯ ಸರ್ವೇಗೆ ತಕ್ಕಂತೆ ಹಕ್ಕು ಪತ್ರದಲ್ಲಿ ಭೂಮಿಯನ್ನು ನಮೂದಿಸಿಲ್ಲ’ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

‘ಜಿಲ್ಲೆಯಲ್ಲಿ ಒಟ್ಟು ಸಲ್ಲಿಕೆಯಾದ 1,900 ಅರ್ಜಿಗಳ ಪೈಕಿ ಈವರೆಗೆ ಕೇವಲ 310 ಅರ್ಜಿಗಳನ್ನು ಮಾತ್ರ ವಿತರಿಸಲಾಗಿದೆ. ಒಕ್ಕಲೆಬ್ಬಿಸಿರುವ ಹಳ್ಳಿಗಳ ಸರ್ವೇ ಕಾರ್ಯ ಮುಗಿದು ತಿಂಗಳುಗಳೇ ಕಳೆದರೂ  ಹಕ್ಕು ಪತ್ರ ವಿತರಿಸಿಲ್ಲ.

ರಾಮನಗರ ತಾಲ್ಲೂಕಿನ ಗೊಲ್ಲರದೊಡ್ಡಿ, ಮಾಗಡಿ ತಾಲ್ಲೂಕಿನ ಜೋಡಗಟ್ಟೆ, ಇರುಳಿಗರ ಕಾಲೊನಿ ಹಾಗೂ ಕನಕಪುರ ತಾಲೂಕಿನ ಬಡುಗಯ್ಯನದೊಡ್ಡಿ ಅರಣ್ಯವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕು’ ಎಂದು ಒತ್ತಾಯಿಸಿದರು.

*
ಆದಿವಾಸಿಗಳಿಗೆ ನೆಲೆ ಕಲ್ಪಿಸುವುದು ಜಿಲ್ಲಾಡಳಿತದ ಕರ್ತವ್ಯ. ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಕಾದವರಿಗೆ ಕೂಡಲೇ ಪತ್ರ ವಿತರಿಸಬೇಕು.
-ಕೃಷ್ಣಮೂರ್ತಿ, ಅಧ್ಯಕ್ಷ, ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.