ADVERTISEMENT

ಬರಗಾಲ: ಮಾವು ಇಳುವರಿ ಕುಸಿತ

ಆರ್.ಜಿತೇಂದ್ರ
Published 6 ಏಪ್ರಿಲ್ 2017, 10:25 IST
Last Updated 6 ಏಪ್ರಿಲ್ 2017, 10:25 IST
ಬರಗಾಲ: ಮಾವು ಇಳುವರಿ ಕುಸಿತ
ಬರಗಾಲ: ಮಾವು ಇಳುವರಿ ಕುಸಿತ   

ರಾಮನಗರ: ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಬರಗಾಲದ ಕಾರಣ ಉತ್ಪನ್ನದ ಆವಕ ಕಡಿಮೆ ಆಗಿದ್ದು, ರೈತರ ಜೊತೆ ವರ್ತಕರೂ ಶಪಿಸುವಂತಾಗಿದೆ.

ರಾಜ್ಯದಲ್ಲಿ ಮಾವು ಬೆಳೆಯುವ ಪ್ರಮುಖ ಜಿಲ್ಲೆಗಳ ಪೈಕಿ ರಾಮನಗರವೂ ಒಂದಾಗಿದೆ. ಇಲ್ಲಿನ 22,131 ಹೆಕ್ಟೇರ್‌ ಪ್ರದೇಶದಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ ಸರಾಸರಿ 10–12 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಮಾವು ಇಳುವರಿ ಸಿಗುತ್ತಿದೆ. ಇದರಲ್ಲಿ ರಾಮನಗರ ಜಿಲ್ಲೆ ಒಂದರಲ್ಲಿಯೇ ವಾರ್ಷಿಕ ಸರಾಸರಿ 2ರಿಂದ 3 ಲಕ್ಷ ಟನ್‌ನಷ್ಟು ಇಳುವರಿ ಇದೆ. ಆದರೆ ಸತತ ಬರಗಾಲದ ಪರಿಣಾಮ ಈ ಬಾರಿ ಒಟ್ಟಾರೆ ಉತ್ಪನ್ನವು 1 ಲಕ್ಷ ಮೆಟ್ರಿಕ್‌ ಟನ್‌ಗೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

ರಾಮನಗರದಲ್ಲಿ ಪ್ರಮುಖವಾಗಿ ರಸಪುರಿ, ಸೇಂದೂರ, ಬದಾಮಿ, ಮಲ್ಲಿಕಾ ತಳಿಯ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಹವಾಗುಣದ ಕಾರಣ ಉಳಿದೆಲ್ಲ ಜಿಲ್ಲೆಗಳಿಗಿಂತ ಇಲ್ಲಿ ಮೊದಲು ಕಾಯಿ ಬಲಿತು ಹಣ್ಣಾಗುತ್ತದೆ. ಕಳೆದೊಂದು ವಾರದಿಂದ ಇಲ್ಲಿನ ಎಪಿಎಂಸಿಗೆ ಮಾವಿನ ಕಾಯಿಯ ಆವಕವಾಗುತ್ತಿದೆ. ದಿನವೊಂದಕ್ಕೆ ಸರಾಸರಿ 200–250 ಕ್ವಿಂಟಲ್‌ಗಳಷ್ಟು ಉತ್ಪನ್ನವನ್ನು ರೈತರು ತರುತ್ತಿದ್ದಾರೆ. ಇಲ್ಲಿಂದ ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜೊತೆಗೆ ಮುಂಬೈ, ಸೋಲಾಪುರ ಕಡೆಯಿಂದಲೂ ವರ್ತಕರು ಬಂದು ಹಣ್ಣನ್ನು ಕೊಂಡೊಯ್ಯುತ್ತಿದ್ದಾರೆ.

ADVERTISEMENT

ಈ ವರ್ಷ ರಾಜ್ಯದಲ್ಲಿ ಬರಗಾಲದಿಂದ ಮಾವಿನ ಇಳುವರಿಯು ಶೇ 40ರಷ್ಟು ಕುಸಿದಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಉತ್ಪನ್ನವು ಮಾರುಕಟ್ಟೆ ಸೇರಲು ಆರಂಭಿಸಿದೆ. ‘ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟೂ ಫಸಲು ಇಲ್ಲ. ಈ ರಣಬಿಸಿಲಿನಲ್ಲಿ ಮಾವಿನ ಮರಗಳನ್ನು ಉಳಿಸಿಕೊಳ್ಳುವುದೇ ಸವಾಲು. ಹೀಗಾಗಿ ಕಾಯಿ ಕೈಗೆ ಸಿಕ್ಕಿದಷ್ಟೇ ಲಾಭ’ ಎನ್ನುತ್ತಾರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಮಾವು ಬೆಳೆಗಾರ ಮರಿಚಿಕ್ಕೇಗೌಡ.

ಸರಾಸರಿ ಧಾರಣೆ: ರಾಜ್ಯದಾದ್ಯಂತ ಮಾವು ಉತ್ಪನ್ನ ಕಡಿಮೆ ಆಗಿರುವ ಕಾರಣ ಸಹಜವಾಗಿಯೇ ಬೆಲೆ ಗಗನಮುಖಿ ಆಗಿರಲಿದೆ ಎನ್ನುವುದು ರೈತರ ನಿರೀಕ್ಷೆ ಆಗಿತ್ತು. ಆದರೆ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಅಂತಹ ಏರಿಕೆಯೇನು ಕಂಡುಬಂದಿಲ್ಲ.

‘ನಮ್ಮಲ್ಲಿ ಮಾವು ಉತ್ಪನ್ನ ಕಡಿಮೆ ಇದ್ದರೂ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಉತ್ತಮ ಫಸಲು ಬಂದಿದೆ ಎಂಬ ಮಾಹಿತಿ ಇದೆ. ಹೀಗಾಗಿ ಧಾರಣೆ ಎಂದಿನಂತೆ ಇದೆ. ಮಾವಿನ ಋತು ಈಗಷ್ಟೇ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಏರಲಿದೆ’ ಎನ್ನುತ್ತಾರೆ ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಎಎಆರ್‌ ಮಂಡಿಯ ವರ್ತಕ ಅಬ್ದುಲ್‌ ರಜಾಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.