ADVERTISEMENT

ಬಿಡದಿ: ಕಾರ್ಮಿಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 10:35 IST
Last Updated 3 ಸೆಪ್ಟೆಂಬರ್ 2015, 10:35 IST
ಬಿಡದಿ: ಕಾರ್ಮಿಕರ ಮುಷ್ಕರ
ಬಿಡದಿ: ಕಾರ್ಮಿಕರ ಮುಷ್ಕರ   

ರಾಮನಗರ: ಕೇಂದ್ರ ಸರ್ಕಾರವು ವಿವಿಧ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ಬಿಡದಿಯಲ್ಲಿ ವಿವಿಧ ಕಾರ್ಖಾನೆಗಳ ಕಾರ್ಮಿಕ ಸಂಘಟನೆಗಳು ಮುಷ್ಕರ ನಡೆಸಿದವು.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಸಣ್ಣ, ಮಧ್ಯಮ ಹಾಗೂ ದೊಡ್ಡ ಪ್ರಮಾಣದ ಕಾರ್ಖಾನೆಗಳ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು. ಇದರಿಂದ ಬಹುತೇಕ ಕಾರ್ಖಾನೆಗಳು ರಜೆ ಘೋಷಿಸಿದ್ದವು.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಿಡದಿಯ ಕಾಡುಮನೆ ಹೋಟೆಲ್‌ ಬಳಿ ಸೇರಿದ ವಿವಿಧ ಕಾರ್ಮಿಕ ಒಕ್ಕೂಟಗಳ ಮುಖಂಡರು, ಕಾರ್ಖಾನೆಗಳ ಕಾರ್ಮಿಕರು ಕೈಗಾರಿಕಾ ಪ್ರದೇಶದಲ್ಲಿ ಬೈಕ್‌ ರ್‍ಯಾಲಿ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾರ್ಮಿಕರು ಘೋಷಣೆಗಳನ್ನು ಕೂಗಿದರು. ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರ ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಈ ನೀತಿಗಳಿಂದ ದೇಶದ ಬಡತನ ನಿವಾರಣೆ ಆಗುವುದಿಲ್ಲ. ನಿರುದ್ಯೋಗ ಸಮಸ್ಯೆ ಬಗೆಹರಿಯುವುದಿಲ್ಲ. ಇದಕ್ಕೆ ಬದಲಾಗಿ ನಿರುದ್ಯೋಗ ಹೆಚ್ಚಾಗಿ, ಬಡತನ ಮತ್ತಷ್ಟು ವ್ಯಾಪಿಸುತ್ತದೆ ಎಂದು ಸಿಐಟಿಯು ಸಂಘಟನೆಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಕಟ್ಟಿಮನೆ ದೂರಿದರು.

ಕೇಂದ್ರ ಸರ್ಕಾರದ ಇಂತಹ ಕೆಟ್ಟ ನಿರ್ಧಾರ ಮತ್ತು ನಿಲುವುಗಳನ್ನು ವಿರೋಧಿಸಲು ಕಾರ್ಮಿಕರೆಲ್ಲ ಒಂದಾಗಬೇಕು. ಕಾರ್ಮಿಕರ ಒಗ್ಗಟ್ಟಿನಿಂದ ಮಾತ್ರ ಇಂತಹ ಕಾನೂನು ಜಾರಿಯಾಗದಂತೆ ನೋಡಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಕಾರ್ಮಿಕರಿಗೆ ಉಳಿಗಾಲ ಇಲ್ಲ ಎಂದರು.

ಸಿಐಟಿಯು ಸಂಘಟನೆಯ ಬಿ.ವಿ. ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಕಟುವಾಗಿ ಟೀಕಿಸಿದರು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ವಿಶ್ವಾಸ ಹೊಂದಿರುವ ಕಾರ್ಮಿಕರನ್ನು ಎನ್‌ಡಿಎ ಸರ್ಕಾರ ಸದೆಬಡಿಯಲು ಮುಂದಾಗಿರುವುದು ಸರಿಯಲ್ಲ. ಇದು ಮುಂದುವರೆದರೆ ವಿಚಾರವಾದಿ ಕಾರ್ಲ್ಸ್‌ ಮಾರ್ಕ್ಸ್‌ ಅವರ ವರ್ಗ ಸಂಘರ್ಷಕ್ಕೆ ಇದು ದಾರಿ ಆಗಬಹುದು. ಇದನ್ನು ಕೂಡಲೇ ಅರಿತು ಸರ್ಕಾರ ಕಾರ್ಮಿಕ ಪರ ನಿಲುವು ತಾಳಿದರೆ ಒಳಿತು ಎಂದು ತಿಳಿಸಿದರು.

ಟೊಯೊಟಾ, ವಂಡರ್‌ಲಾ ಸೇರಿದಂತೆ ಬಹುತೇಕ ಎಲ್ಲಕಾರ್ಖಾನೆಗಳ ಕಾರ್ಮಿಕ ಪ್ರತಿನಿಧಿಗಳು ರ್‍ಯಾಲಿ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹಾರೋಹಳ್ಳಿ ಮತ್ತು ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ಸಂಘಟನೆಗಳು ರ್‍ಯಾಲಿ, ಮೆರವಣಿಗೆ, ರಸ್ತೆ ತಡೆ ಸೇರಿದಂತೆ ಪ್ರತಿಭಟನಾ ಧರಣಿಯನ್ನು ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.