ADVERTISEMENT

ಬೇಸಿಗೆ ಶಿಬಿರಗಳಲ್ಲಿ ಚಿಣ್ಣರ ಕಲರವ

ರಜೆ ಸವಿ ಅನುಭವಿಸಲು ಶಿಬಿರಗಳು ಪೂರಕ ವೇದಿಕೆಗಳು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 10:05 IST
Last Updated 20 ಏಪ್ರಿಲ್ 2018, 10:05 IST
ಬಿಡದಿಯ ಶಾನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಕಲಿಕಾ ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು
ಬಿಡದಿಯ ಶಾನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಕಲಿಕಾ ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು   

ರಾಮನಗರ: ಇದೀಗ ಶಾಲೆಗೆ ರಜೆ. ಎಲ್ಲೆಡೆಯೂ ಬೇಸಿಗೆ ಶಿಬಿರಗಳ ಸುಗ್ಗಿ. ಚಿಣ್ಣರು ಪಠ್ಯೇತರ ಚಟುವಟಿಕೆಗಳಲ್ಲಿ ತಲ್ಲೀನರಾಗುವ ಸಮಯ. ಓದಿನಿಂದ ಹೊರಬಂದು ಹವ್ಯಾಸಗಳಿಗೆ ಒತ್ತು ನೀಡುವ ಕಾಲಾವಧಿ.

ಈ ಶಿಬಿರ­ಗಳಲ್ಲಿ ಮಕ್ಕಳ ಮನೋವಿಕಾಸಕ್ಕೆ ಪೂರಕ­ವಾದ ಕಾರ್ಯಕ್ರಮ ರೂಪಿಸು­ವು­ದ­ರಿಂದ ಸ್ವಯಂ ಪ್ರೇರಿತರಾಗಿ ಚಿಣ್ಣರು ಆಸಕ್ತಿ ಯಿಂದ ಪಾಲ್ಗೊಂಡು ಕಲರವ ಮೂಡಿಸುತ್ತಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಷ್‌ ಇಂಡಿಯಾ ಪ್ರತಿಷ್ಠಾನ, ಯೆಲ್ಲೊ ಅಂಡ್‌ ರೆಡ್ ಫೌಂಡೇಷನ್‌ ಆಶ್ರಯದಲ್ಲಿ ‘ಕನಸುಗಳಿಗೊಂದು ರೆಕ್ಕೆ’ ಎಂಬ ಪರಿಕಲ್ಪನೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗಾಗಿ ಬೇಸಿಗೆ ಕಲಿಕಾ ಶಿಬಿರ ನಡೆಸಲಾಗುತ್ತಿದೆ. ಬಿಡದಿ ಶಾನಮಂಗಲ, ಜೋಡಿಕರೆನಹಳ್ಳಿ ಗ್ರಾಮಗಳಲ್ಲಿ ಶಿಬಿರಗಳು ನಡೆಯುತ್ತಿವೆ.

ADVERTISEMENT

ಇಲ್ಲಿನ ಎಂಎಂಯು ಕಾಲೇಜ್ ಹತ್ತಿರ ಸಾಹಸ ಕಲಾಶಿಕ್ಷಣ ಕೇಂದ್ರದ ವತಿಯಿಂದ ಚಿನ್ನರ ಕೂಟ ಬೇಸಿಗೆ ಶಿಬಿರ, ಕಲಾ ಜ್ಯೋತಿ ಚಾರಿಟಬಲ್ ಟ್ರಸ್ಟ್‌, ಸರ್ವಸ್ವ ಗ್ರಾಮೀಣ ಸೇವಾ ಟ್ರಸ್ಟ್‌, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ವತಿಯಿಂದ ಬೇಸಿಗೆ ಶಿಬಿರ ನಡೆಯುತ್ತಿದೆ.

ಶಿಬಿರಗಳಲ್ಲಿ ಮಕ್ಕಳ ಕನಸು, ಗುರಿ ಮುಕ್ತವಾಗಿ ಪ್ರಕಟಗೊಳ್ಳುತ್ತದೆ. ಕುಂಚದಲ್ಲಿ ವಿಶಿಷ್ಟ ಕಲಾಕೃತಿಗಳು ಮೂಡುತ್ತವೆ. ಹಾಡು, ಕಥೆ
ಕೇಳಲು ಅದಮ್ಯ ಉತ್ಸಾಹ ಪುಟಿಯುತ್ತದೆ. ಮಕ್ಕಳಿಗೆ ಮಾರ್ಗ­ದರ್ಶ­ನದ ಜತೆಗೆ ವ್ಯಕ್ತಿತ್ವ ವಿಕಸನದ ತರಬೇತಿಯೂ ನಡೆಯು­ತ್ತದೆ. ನಿಗದಿತ ತರಬೇತಿ ಜತೆಗೆ ತಮಗಿಷ್ಟವಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿ, ರಜೆಯ ಸವಿ ಅನುಭವಿಸಲು ಸಾಧ್ಯವಾಗುತ್ತದೆ.

ಕ್ಷೇತ್ರ ವೀಕ್ಷಣೆ: ಈ ಶಿಬಿರಗಳು ವಿಚಾರಗೋಷ್ಠಿಗೆ ಸೀಮಿತವಾಗಿಲ್ಲ. ಅಧ್ಯಯನದ ಜತೆಗೆ ಪ್ರವಾ­ಸವೂ ಒಂದು ಭಾಗವಾಗಿದೆ. ತಾಲ್ಲೂಕಿನಲ್ಲಿನ ಬೆಟ್ಟಗುಡ್ಡಗಳು, ಪೊಲೀಸ್ ಠಾಣೆ, ಅಗ್ನಿ ಶಾಮಕ ಠಾಣೆ, ಆಕಾಶವಾಣಿ ಕೇಂದ್ರ, ನಿರ್ಮಿತಿ ಕೇಂದ್ರಗಳಿಗೆ ಭೇಟಿ
ನೀಡುವ ಕಾರ್ಯ­ಕ್ರಮ ರೂಪಿಸಲಾಗಿದೆ. ಈ ಕೇಂದ್ರಗಳ ಕಾರ್ಯವೈಖರಿ, ಸಿಬ್ಬಂದಿ­ಯೊಂದಿಗೆ ದೈನಂದಿನ ಕಾರ್ಯ ಕಲಾ­ಪ­ಗಳ ಬಗ್ಗೆ
ವಿದ್ಯಾರ್ಥಿಗಳೇ ಮಾಹಿತಿ ಪಡೆಯಲಿದ್ದಾರೆ ಎನ್ನುತ್ತಾರೆ ಚಿಗುರು ಬೇಸಿಗೆ ಶಿಬಿರದ ಸಂಘಟಕ ಎಂ.ಎಸ್.ಚನ್ನವೀರಪ್ಪ.

ಮಕ್ಕಳಿಗೆ ಶಿಕ್ಷಣ, ಸನ್ನಡತೆ, ಸಂಗೀತ, ಚಿತ್ರಕಲೆ, ಯೋಗ ಸೇರಿದಂತೆ ಆನೇಕ ವಿಚಾರಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತಿದೆ ಎಂದು
ಯಲ್ಲೊ ಅಂಡ್‌ ರೆಡ್‌ ಸಂಸ್ಥೆಯ ನಿರ್ದೇಶಕ ಆನಂದ್‌ ಶಿವ ತಿಳಿಸಿದರು.

ಜಾನಪದ ರಂಗ ತರಬೇತಿ ಶಿಬಿರದಲ್ಲಿ ಗಿಡ–ಮರಗಳ ನೆರಳಲ್ಲಿನಲ್ಲಿ ಭೌತಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಆಟ– ಪಾಠ, ಕಥೆ– ಕವನ, ನಾಟಕ– ಬಯಲಾಟ, ಪೇಯಿಂಟಿಂಗ್‌– ಡ್ರಾಯಿಂಗ್‌ ಸೇರಿದಂತೆ ನಾನಾ ರೀತಿ ಚಟುವಟಿಕೆ, ಹೊಲಗಳಿಗೆ ಕರೆದುಕೊಂಡು ಬೆಳೆ, ಮಣ್ಣಿನ ಆರೋಗ್ಯ, ಪೌಷ್ಟಿಕ ಆಹಾರದ ಅಗತ್ಯ ಮತ್ತು ಸಿದ್ಧಪಡಿಸುವ ವಿಧಾನಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ ಎನ್ನುತ್ತಾರೆ ಶಿಬಿರದ ಸಂಘಟಕ ಹಾಸನ ರಘು

ಕಂಪ್ಯೂಟರ್‌ ತರಬೇತಿ, ಇಂಗ್ಲಿಷ್‌ ಸ್ಪೀಕಿಂಗ್‌, ಪರಿಸರದ ಕಾಳಜಿ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದು ಬಾಷ್‌ ಇಂಡಿಯಾ ಪ್ರತಿಷ್ಠಾನದ ಪುಂಡಲೀಕ್‌ ಕಾಮತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.