ADVERTISEMENT

ಭೂಹಳ್ಳಿ: ಅಧ್ಯಕ್ಷ ಸ್ಥಾನಕ್ಕೆ ‘ಲಾಟರಿ’ ಆಯ್ಕೆ

ಚನ್ನಪಟ್ಟಣ: ನಾಲ್ಕು ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರ ಮೇಲುಗೈ: ಮೂರರಲ್ಲಿ ಜೆಡಿಎಸ್ ಬೆಂಬಲಿಗರಿಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 9:28 IST
Last Updated 2 ಜುಲೈ 2015, 9:28 IST

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಬುಧವಾರ ನಡೆದ 8 ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ 4 ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹಾಗೂ 3 ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರ ಪಡೆದಿದ್ದು, ಒಂದು ಪಂಚಾಯಿತಿಯ ಚುನಾವಣೆ ಮುಂದೂಡಲ್ಪಟ್ಟಿತು.

ತಾಲ್ಲೂಕಿನ ಭೂಹಳ್ಳಿ, ಸಿಂಗರಾಜಿಪುರ, ಬಾಣಗಹಳ್ಳಿ, ಮೈಲನಾಯಕನಹಳ್ಳಿ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಪಡೆದರೆ, ಅಕ್ಕೂರು, ಮಾಕಳಿ, ಎಚ್.ಬ್ಯಾಡರಹಳ್ಳಿ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರ ಪಡೆದರು. ಹಾರೋಕೊಪ್ಪ ಪಂಚಾಯಿತಿ ಚುನಾವಣೆ ಕೋರಂ ಇಲ್ಲದ ಕಾರಣ ಮುಂದೂಡಲ್ಪಟ್ಟಿತು.

ಭೂಹಳ್ಳಿ ಲಾಟರಿ ಆಯ್ಕೆ:  ತಾಲ್ಲೂಕಿನ ಭೂಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 16 ಸದಸ್ಯರಿದ್ದು, ಬಿಸಿಎಂ (ಬಿ) ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಾಗಿದ್ದ ಕಾಂಗ್ರೆಸ್ ಬೆಂಬಲಿತ ನಿಂಗೇಗೌಡ ಮತ್ತು ಜೆಡಿಎಸ್ ಬೆಂಬಲಿತ ಚಿಕ್ಕತಾಯಮ್ಮ ತಲಾ 8 ಮತಗಳನ್ನು ಪಡೆದು ಸಮಬಲವಾಗಿದ್ದ ಕಾರಣ ಲಾಟರಿ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಲಾಟರಿಯಲ್ಲಿ ಕಾಂಗ್ರೆಸ್ ಬೆಂಬಲಿತ ನಿಂಗೇಗೌಡಗೆ ಅದೃಷ್ಟ ಒಲಿಯಿತು.

ಉಪಾಧ್ಯಕ್ಷ ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತ ಲಕ್ಷ್ಮಮ್ಮ 10 ಮತ ಪಡೆದು ಜಯಶಾಲಿಯಾದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.

ಸಿಂಗರಾಜಪುರ ಗ್ರಾ.ಪಂ.:  ಸಿಂಗರಾಜಪುರ ಗ್ರಾಮ ಪಂಚಾಯ್ತಿಯ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಲಸಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಾಗಿದ್ದ ಕಾಂಗ್ರೆಸ್ ನ ಮೀನಾಕುಮಾರಿ ಹಾಗೂ ಬಂಡಾಯ ಕಾಂಗ್ರೆಸ್ ನ ಮಂಗಳಗೌರಿ ಸ್ಪರ್ಧಿಗಳಾಗಿದ್ದರು.

ಮೀನಾಕುಮಾರಿ 6 ಮತ ಪಡೆದು ಜಯ ಸಾಧಿಸಿದರೆ, ಮಂಗಳಗೌರಿ 5 ಮತ ಪಡೆದು ಸೋಲುಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಅಪ್ಪಾಜಿ ಹಾಗೂ ಭಾಗ್ಯಮ್ಮ್ಮ ಸ್ಪರ್ಧಿಸಿದ್ದರು. ಅಪ್ಪಾಜಿ 6 ಮತಗಳನ್ನು ಪಡೆದು ಜಯ ಸಾಧಿಸಿದರು. ಭಾಗ್ಯಮ್ಮ್ಮ 5 ಮತಗಳನ್ನು ಪಡೆದು ಪರಾಜಯಗೊಂಡರು. ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಾಗಿತ್ತು.

ಮೈಲನಾಯ್ಕನಹಳ್ಳಿ ಗ್ರಾ.ಪಂ. ಅವಿರೋಧ:  ಮೈಲನಾಯ್ಕನಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಎ.ಗಾಯಿತ್ರಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ಅಲಮೇಲಮ್ಮ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಬಿಸಿಎಂ(ಎ), ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಆರ್.ಮಂಜುನಾಥ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಅಕ್ಕೂರು ಗ್ರಾ.ಪಂ. ಅವಿರೋಧ: ಅಕ್ಕೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪುಷ್ಪಲತಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಬಾಣಗಹಳ್ಳಿ ಗ್ರಾ.ಪಂ.: ಬಾಣಗಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 13 ಸದಸ್ಯರಿದ್ದು, ಇದರಲ್ಲಿ ಜೆಡಿಎಸ್ ಬೆಂಬಲಿತ ರಾಘವ 5 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಫರ್ಧಿಗಳು ತಲಾ 4 ಮತಗಳನ್ನು ಪಡೆದು ಪರಾಜಯಗೊಂಡರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಮಾಕಳಿ ಗ್ರಾ.ಪಂ.: ಮಾಕಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಲಕ್ಷ್ಮಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವರಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಬಿಸಿಎಂ (ಎ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.

ಎಚ್.ಬ್ಯಾಡರಹಳ್ಳಿ ಗ್ರಾ.ಪಂ.: ಎಚ್.ಬ್ಯಾಡರಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಚನ್ನಂಕೇಗೌಡ 9 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಸಿ.ರಾಮಯ್ಯ 6 ಮತಗಳನ್ನು ಪಡೆದು ಪರಾಜಯಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ನಾಗಮ್ಮ 9 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಫರ್ಧಿ ರಿಜ್ವಾನಬಾನು 6 ಮತಗಳನ್ನು ಪಡೆದು ಪರಾಜಯಗೊಂಡರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಆಲೂರೇಗೌಡ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಹಾರೋಕೊಪ್ಪ ಗ್ರಾ.ಪಂ.:  ಹಾರೋಕೊಪ್ಪ ಗ್ರಾಮ ಪಂಚಾಯ್ತಿಯಲ್ಲಿ 13 ಸದಸ್ಯರ ಬಲ ಇದ್ದು ಕೇವಲ 4 ಮಂದಿ ಸದಸ್ಯರು ಹಾಜರಾಗಿ ಉಳಿದವರು ಗೈರು ಹಾಜರಾಗಿದ್ದ ಕಾರಣ ಕೋರಂ ಕೊರತೆ ಎಂದು ತೀರ್ಮಾನಿಸಿ ಚುನಾವಣಾಧಿಕಾರಿ ರಘು ಅವರು ಚುನಾವಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.